ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಸಿದ್ದಾರೂಢ ಮಠದ ಸಚ್ಚಿದಾನಂದ ಶ್ರೀ
ರಾಣೇಬೆನ್ನೂರು, ಫೆ.4- `ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುನ್ನಿಗಳನೇನೆಂಬೆ ರಾಮನಾಥ’ ಎನ್ನುವಂತೆ ಇಲ್ಲಿರುವುದೆಲ್ಲ ಪರಮಾತ್ಮನದೆ. ಈ ದೇಹ ಪರಮಾತ್ಮನದೆ. ಈ ದೇಹ ದಾನ ನೀಡಿದ ಪರಮಾತ್ಮನನ್ನು ಮರೆಯಬಾರದು ಎಂದು ಚೌಟಗಿ ಮಠದ ಶ್ರೀ ಲಿಂಗಯ್ಯ ಸ್ವಾಮಿಗಳು ನುಡಿದರು.
ಶ್ರೀಗಳು ನಗರದ ಸಿದ್ದಾರೂಢ ಮಠದಲ್ಲಿ 25ನೇ ವೇದಾಂತ ಪರಿಷತ್ ಉದ್ಘಾಟಿಸಿ, ` ಕಾಯವಿಡಿದಾತ್ಮ ರಾಶಿಗೆ ಪರತರ ಮುಕ್ತಿಗು ಪಾಯವಿದು ನಿಜಶಿವ ಮಂತ್ರ’ ವಿಷಯ ಕುರಿತು ಬೋಧನೆ ಮಾಡಿದರು.
ಸಿರಿ ಇದ್ದಾಗ ಬಂದುಂಡು ಹೋಗುವ ಬಂಧು ಗಳು, ನಿನ್ನ ಬಳಿ ಸಿರಿ ಕಡಮೆಯಾಗುತ್ತಲೇ ದೂರ ಸರಿವರು. ದೇವರು ಕೊಟ್ಟ ದಾನದ ಈ ದೇಹವನ್ನು ಸದ್ಭಳಕೆ ಮಾಡಿಕೊಳ್ಳದೇ ಸೆಗಣಿಯಲ್ಲಿ ಹುಟ್ಟಿ ಅದನ್ನೇ ತಿಂದು ಬದುಕಿ, ತನ್ನ ಬದುಕು ಮುಗಿಸುವ ಹುಳದಂತೆ, ಪರಮಾತ್ಮನನ್ನ ಮರೆತು ಬದುಕು ನಡೆಸುವ ಮನುಷ್ಯನಿಗೆ ಮುಕ್ತಿ ಸಿಗಲಾರದು ಎಂದು ಹುಬ್ಬಳ್ಳಿ ಸಿದ್ದಾರೂಢ ಮಠದ ಶ್ರೀ ಸಚ್ಚಿದಾನಂದ ಸ್ವಾಮಿಗಳು ನುಡಿದರು.
ಸಿದ್ದಾರೂಢರಂಥ ಸದ್ಗುರು ಮುಂದೆಂದು ಸಿಗಲಾರರು. ಅವರು ಹೇಳಿಕೊಟ್ಟ ಓಂ ನಮ ಶಿವಾಯ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ, ಆಲಿಸಿದರೆ ಮನುಷ್ಯನ ಬದುಕು ಶ್ರೇಷ್ಠವಾಗಲಿದೆ ಎಂದು ತೆಲಗಿ ಶಂಭುಲಿಂಗಾಶ್ರಮದ ಶ್ರೀ ಪೂರ್ಣಾನಂದ ಸ್ವಾಮಿಗಳು ನುಡಿದರು.
ಶ್ರೀ ಮಠದ ಮಲ್ಲಯ್ಯಜ್ಜ ಸಮಾರಂಭದ ಸಾನಿಧ್ಯ ವಹಿಸಿದ್ದರು. ರೇವಣ್ಣ ಸ್ವಾಗತಿಸಿದರು, ಭೀಮರಡ್ಡಿ ವಂದಿಸಿದರು, ಎ. ದೇವೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.