ಹರಿಹರ, ಫೆ.4- ನಗರದ ಅಂಜುಮಾನ್ ಇಸ್ಲಾಮಿಯಾ ಸಮಿತಿಗೆ ರಾಜ್ಯ ವಕ್ಫ್ ಮಂಡಳಿ ಹೈಟೆಕ್ ಆಂಬ್ಯುಲೆನ್ಸ್ ನೀಡಿದ್ದು, ಅತಿ ಶೀಘ್ರದಲ್ಲೇ ಅದನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಸೈಯದ್ ಏಜಾಜ್ ಆಹ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಮಾಜ ಸೇವಕ ಹಾಗೂ ಸಮಿತಿ ನಿರ್ದೇಶಕ ಸೈಯದ್ ಸನಾವುಲ್ಲಾ, ಜಿಲ್ಲಾ ವಕ್ಫ್ ಅಧ್ಯಕ್ಷ ಮಹಮ್ಮದ್ ಸಿರಾಜ್ ಆಹ್ಮದ್ ಮತ್ತು ರಾಜ್ಯ ಸಮಿತಿ ಸದಸ್ಯ ಅನ್ವರ್ ಬಾಷಾ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಸಾಬ್ ಮನವಿ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಸಚಿವ ಜಮೀರ್ ಆಹ್ಮದ್ ಅವರು ಸುಮಾರು 39 ಲಕ್ಷ ರೂ. ವೆಚ್ಚದ ಆಂಬ್ಯುಲೆನ್ಸ್ ವಾಹನವನ್ನು ಹರಿಹರದ ಅಂಜುಮಾನ್ ಇಸ್ಲಾಮಿಯಾ ಸಮಿತಿಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದ್ದಾರೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆಸೀಫ್ ಜುನೇದಿ ಮಾತನಾಡಿ, ವಾಹನವನ್ನು ಆರ್.ಟಿ.ಓ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಮತ್ತು ಪ್ರತ್ಯೇಕವಾದ ದೂರವಾಣಿ ನಂಬರ್ ಪಡೆದು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಿಲ್ಲೆಗೆ ಒಂದರಂತೆ ರಾಜ್ಯದ ಮೂವತ್ತು ಜಿಲ್ಲಾ ಕೇಂದ್ರಕ್ಕೆ ಆಂಬ್ಯುಲೆನ್ಸ್ ವಾಹನ ನೀಡಿದೆ. ಆದರೆ, ಸಚಿವರು ಹರಿಹರ ನಗರಕ್ಕೆ ಹೈಟೆಕ್ ಮಾದರಿಯ ವಾಹನವನ್ನು ನೀಡಿದ್ದಾರೆ ಎಂದು ಅಂಜುಮಾನ್ ಇಸ್ಲಾಮಿಯಾ ಸಮಿತಿ ನಿರ್ದೇಶಕ ಆರ್.ಸಿ. ಜಾವೇದ್ ತಿಳಿಸಿದರು.
ಈ ಸಂದರ್ಭದಲ್ಲಿ ಅಂಜುಮಾನ್ ಇಸ್ಲಾಮಿಯಾ ಸಮಿತಿಯ ಉಪಾಧ್ಯಕ್ಷ ಎಂ.ಎಂ.ಬಿ ಫಾರೂಕ್, ಸಹ ಕಾರ್ಯದರ್ಶಿ ಸಾಧಿಕ್ ಉಲ್ಲಾ, ನಿರ್ದೇಶಕರಾದ ಸನಾವುಲ್ಲಾ, ಮುಜಾಮಿಲ್ ಬಿಲ್ಲು, ದೋಸ್ತಾನ ಸೈಯದ್ ಬಷೀರ್, ರೋಷನ್ ಜಮೀರ್ ತಹಶೀಲ್ದಾರ್, ಅಪ್ರೋಜ್ ಖಾನ್, ಹೆಚ್. ನೂರುಲ್ಲಾ ಹಾಗೂ ಇತರರು ಹಾಜರಿದ್ದರು.