ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಎಚ್.ಬಿ. ಮಂಜುನಾಥ್
ದಾವಣಗೆರೆ, ಫೆ. 2 – ತನ್ನನ್ನು ತಾನು ಯತಾರ್ಥ ವಾಗಿ ಅರ್ಥಮಾಡಿಕೊಳ್ಳುವ ಅರಿವೇ ಅಧ್ಯಾತ್ಮವಾಗಿದ್ದು, ಇದು ಎಷ್ಟು ಕಷ್ಟವೆಂದು ಭಾವಿಸುತ್ತಾರೋ ಅಷ್ಟೇ ಸುಲಭವೂ ಆಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.
ಅವರು ಇಂದು ಸಂಜೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ 27ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಾಡಾಗಿದ್ದ ಧಾರ್ಮಿಕ ಮತ್ತು ಅಧ್ಯಾತ್ಮಿಕ ವಿಷಯವಾಗಿ ಉಪನ್ಯಾಸ ನೀಡುತ್ತಾ, ತನ್ನ ಆತ್ಮದ ಅರಿವಾದಾಗ ನಾಮ ರೂಪಾತ್ಮಕವಾಗಿ ಬೇರೆ ಬೇರೆಯಾದರೂ ಎಲ್ಲರಲ್ಲಿರುವುದು ತನ್ನಂತಹುದೇ ಆತ್ಮ ಎಂಬುದು ವೇದ್ಯವಾಗುತ್ತದೆ. ಇದು ಪರಮಾತ್ಮವನ್ನು ಅರಿವಿಗೆ ತಂದುಕೊಳ್ಳಲು ಸಾಧನಾ ಸೋಪಾನವಾಗುತ್ತದೆ. ಇಂತಹ ಪ್ರಕ್ರಿಯೆಗಳು ಪ್ರಪಂಚದಲ್ಲಿ ಭಾರತ ದೇಶದಲ್ಲಿ ಮಾತ್ರವೇ ಸಾಧ್ಯ. ಕಾರಣ ನಮ್ಮ ಸನಾತನ ಚಿಂತನೆಗಳು ಇದಕ್ಕೆಲ್ಲಾ ಮಾರ್ಗಸೂಚಿಗಳಾಗಿವೆ. ಆದರೆ, ಕುಹಕಿಗಳು ನಮ್ಮ ಸನಾತನ ಚಿಂತನೆಗಳನ್ನೇ ತಪ್ಪಾಗಿ ಅರ್ಥೈಸುತ್ತಾರೆ. ಇದಕ್ಕೆ ಅವರ ಅಜ್ಞಾನ ಅಥವಾ ಪೂರ್ವಗ್ರಹಗಳೇ ಕಾರಣವಾಗಿವೆ ಎಂದು ಮಂಜುನಾಥ್ ತಿಳಿಸಿದರು.
ಆಧ್ಯಾತ್ಮಿಕ ಚಿಂತನೆಯ ಹಾದಿಯಲ್ಲಿರುವವರ ದಾರಿ ತಪ್ಪಿಸಲು ಹೊರಟವರು ತಾವೇ ದಾರಿ ತಪ್ಪಿ ಕಂಗಾಲಾಗಿ ಕೊನೆಗೆ ದಾರಿ ಕಾಣಲು ತಾವು ಧಿಕ್ಕರಿಸಿದ ಅಧ್ಯಾತ್ಮಕ್ಕೆ ಮೊರೆ ಹೋಗುತ್ತಾರೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ಮಂಜುನಾಥ್ ಅವರು ವಿವರಿಸಿದರು.
ಲಯನ್ಸ್ ಭವನದ ಹೊರಾವರಣದಲ್ಲಿ ನೆರವೇರಿದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ದೀಪಾ ಮಾಡಿದರೆ, ಪ್ರಾರ್ಥನೆಯನ್ನು ವಿದುಷಿ ಶೀಲಾ ನಟರಾಜ ಹಾಡಿದರು. ಸ್ವಾಗತವನ್ನು ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಕೋರಿದರು. ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಕಾರ್ಯದರ್ಶಿ ವಿ.ವೀರಭದ್ರರಾವ್, ಖಜಾಂಚಿಗಳಾದ ನಾಗಭೂಷಣ್ ಕಡೇಕೊಪ್ಪ, ತಾತಾ ಕೆ.ಜಯಂತ್ ಹಾಗೂ ಶ್ರೀಮತಿ ಪ್ರಭಾ ಉಪಸ್ಥಿತರಿದ್ದರು.