ವಿರಕ್ತ ಮಠದ ಬಸವೇಶ್ವರ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ
ಹರಪನಹಳ್ಳಿ, ಫೆ.2- ರೈತ ಒಕ್ಕಲುತನ ನಿಲ್ಲಿಸಿದರೆ, ಜಗತ್ತೇ ಹಸಿವಿನಿಂದ ಬಿಕ್ಕಬೇಕಾಗುತ್ತದೆ. ರೈತನ ಉದಾರ ಗುಣದಿಂದ ಎಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂದು ಶಿವಮೊಗ್ಗದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹೇಳಿದರು.
ತಾಲ್ಲೂಕಿನ ಅರಸೀಕೆರೆ ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ ಬಸವೇಶ್ವರ ಮಹಾದ್ವಾರ, ವಸತಿ ನಿಲಯ ಮತ್ತು ಇತರೆ ಕಟ್ಟಡವನ್ನು ಉದ್ಘಾಟಿಸಿ ಸರ್ವ ಧರ್ಮ ಸಮ್ಮೇಳನ, ಕೃಷಿ ಮೇಳದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕೋಲಶಾಂತೇಶ್ವರ ಸ್ವಾಮಿಗಳು ಮಠಕ್ಕೆ ಸೀಮಿತವಾದ ಭೂಮಿಯಲ್ಲೇ ದುಡಿದು ಮಠವನ್ನು ಶ್ರೀಮಂತಗೊಳಿಸಿದ್ದಾರೆ. ಇಂದು ವ್ಯಾಪಾರಿಗಳ, ಮಧ್ಯವರ್ತಿಗಳ ಹಾವಳಿಯಿಂದ ಕೃಷಿಕ ಬಡವನಾಗಿದ್ದಾನೆ ಎಂದು ಶೋಚಿಸಿದರು.
ಇತ್ತೀಚಿಗೆ ಭೂಮಿಯಲ್ಲಿ ಅಂತರ್ಜಲ ಕಡಿಮೆ ಆಗುತ್ತಿದ್ದು, ಸರ್ಕಾರ ಮತ್ತು ವಿಜ್ಞಾನಿಗಳು ಕೃಷಿ ಕೇತ್ರಕ್ಕೆ ಅವಶ್ಯ ಸೌಲಭ್ಯ ಕಲ್ಪಿಸಬೇಕಿದೆ ಎಂದು ಹೇಳಿದರು.
ಅರಸೀಕೆರೆಯ ಕೋಲಶಾಂತೇಶ್ವರ ಶ್ರೀಗಳು ಕಾಯಕ ಯೋಗಿಗಳಾಗಿ ಕೃಷಿಯಲ್ಲಿ ತೊಡಗಿ ಇತರರಿಗೆ ಮಾದರಿ ಆಗಿದ್ದಾರೆ ಎಂದರು.
ಪಂಚಗಣಾಧೀಶ್ವರರು ಈ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಲೋಕಕ್ಕೆ ಉತ್ತಮ ಸಂದೇಶ ಕೊಟ್ಟ ಬಸವಣ್ಣನವರ ಮಹಾದ್ವಾರ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ವಿ.ಎಂ. ಉಮೇಶ್ ಮಾತನಾಡಿ, ರೈತನು ಅವಧಿಗೂ ಮುನ್ನ ಬೆಳೆಯನ್ನು ವೇಗವಾಗಿ ಬೆಳೆಯಲು ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ ಸೇರಿಸುತ್ತಿರುವುದರಿಂದ ಭೂಮಿಯು ನೈಜ ಸತ್ವ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಯಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಪಡೆದುಕೊಳ್ಳಬಹುದು. ರೈತನ ದುಡಿಮೆ ಫಲದಿಂದ ದೇಶದಲ್ಲಿ ಕೈಗಾರಿಕೆಗಳು ಹಾಗೂ ನವೋದ್ಯಮಗಳು ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಬೆಳವಣಿಗೆಯಾಗಲು ಸಾಧ್ಯ ಎಂದರು.
ಅಕ್ಷರ ಸಿಡ್ಸ್ ಮಾಲೀಕ ಎನ್. ಕೊಟ್ರೇಶ್ ಮಾತನಾಡಿ, ಇಂದಿನ ಆಹಾರ ಧಾನ್ಯಗಳಲ್ಲಿ ಪೌಷ್ಠಿಕಾಂಶಗಳ ಕೊರತೆ ಹೆಚ್ಚಾಗಿದೆ. ಹಾಗಾಗಿ ಹೆಚ್ಚು ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆದಾಗ ಧಾನ್ಯಗಳಲ್ಲಿ ಹೆಚ್ಚು ಪೌಷ್ಠಿಕಾಂಶ ಪಡೆಯಬಹುದು. ಇಂತಹ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಗೂ ಆಯಸ್ಸು ವೃದ್ಧಿಯಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕೃಷಿ ಕೇತ್ರದಲ್ಲಿ ಸಾಧನೆಗೈದ ರೈತರಿಗೆ ಕೋಲಶಾಂತೇಶ್ವರ ಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಡೂರು ವಿರಕ್ತ ಮಠದ ಪ್ರಭು ಶ್ರೀಗಳು, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿಗಳು, ಕೂಡ್ಲಿಪೇಟೆಯ ಕಲ್ಲಳ್ಳಿಮಠದ ರುದ್ರಮುನಿ ಶ್ರೀಗಳು, ಕೂಲಹಳ್ಳಿ ಚಿನ್ಮಯಾನಂದ ಶ್ರೀಗಳು, ಅಡವಿಹಳ್ಳಿ ವೀರಗಂಗಾಧರ ಹಾಲಸ್ವಾಮಿಗಳು, ನಿಚ್ಚವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮಿಗಳು, ಕ್ಯಾರಕಟ್ಟಿ ಅಜ್ಜಯ್ಯ ಸ್ವಾಮಿಗಳು, ಮಾಜಿ ಸಂಸದ ವೈ. ದೇವೇಂದ್ರಪ್ಪ, ಬಿಡಿಸಿಸಿ ನಿರ್ದೇಶಕ ವೈ.ಡಿ. ಅಣ್ಣಪ್ಪ, ಎ.ಬಿ. ಪ್ರಶಾಂತ್ ಪಾಟೀಲ್ ಸೇರಿದಂತೆ ಇತರರಿದ್ದರು.