ಸಮಸಮಾಜ ಕಟ್ಟಲು ಯುವಕರು ಮುಂದಾಗಲಿ

ಸಮಸಮಾಜ ಕಟ್ಟಲು ಯುವಕರು ಮುಂದಾಗಲಿ

ಹೊಳಲ್ಕೆರೆಯಿಂದ ಉಳವಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ

ಮಾಯಕೊಂಡ, ಜ. 22- ಶರಣ ಧರ್ಮ ಪಾಲಿಸಿ, ಸಮಸಮಾಜ ಕಟ್ಟಲು ಯುವಕರು ಮುಂದಾಗಬೇಕು ಎಂದು ಹೊಳಲ್ಕೆರೆ ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಕರೆ ನೀಡಿದರು.

ಇಲ್ಲಿನ ಮೈಲಾರ ಲಿಂಗೇಶ್ವರ ದೇವಾಲಯದಲ್ಲಿ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣರ ವಚನ ಸಂದೇಶ ಪಾಲಿಸಿದರೆ ಜನಜೀನದಲ್ಲಿ ಬದಲಾವಣೆ ತರುತ್ತದೆ. ಶರಣರು ವೇಶ್ಯೆಯರನ್ನೂ ಪರಿವರ್ತನೆ ಮಾಡಿದವರು. ಅನುಭವ ಮಂಟಪ ಸಮಾಜದಲ್ಲಿ ದಮನಿತರಾದ  ಕಾಯಕ ಜೀವಿಗಳಿಂದಲೂ ವಚನ ಬರೆಯಿಸಿತು. ಬಸವಣ್ಣನವರ ಬದುಕೇ ಒಂದು ಆದರ್ಶ. ಜಾತೀಯತೆ ತೊಲಗಬೇಕು. ಬಸವ ಧರ್ಮ ಎಲ್ಲರ ಧರ್ಮ ಇದಕ್ಕೆ  ಜಾತಿ ಲೇಪನ ಸಲ್ಲದು. ಕನ್ನಡದ ಮೊದಲ ವೈಚಾರಿಕ ಪಂಥವೇ ಶರಣ ಧರ್ಮ.  ಬಸವಣ್ಣ ವೇದಕಾಲದಿಂದಲೂ ನಡೆದ ಸ್ತ್ರೀ ಶೋಷಣೆ ವಿರುದ್ಧ ಧ್ವನಿ ಎತ್ತಿದರು. ಬ್ರಾಹ್ಮಣ ಮತ್ತು ದಲಿತರ ವಿವಾಹ ಮಾಡಿದ್ದನ್ನು ಪಟ್ಟ ಭದ್ರರು ಸಹಿಸದ ಕಾರಣ ಬಸವಣ್ಣ ಪದವಿ ತ್ಯಜಿಸಬೇಕಾಯಿತು, ಶರಣರ ಕಗ್ಗೊಲೆ ನಡೆಯಿತು. ಇನ್ನಾದರೂ ಬಸವ ತತ್ವ ಮತ್ತು ವಚನ ಸಾಹಿತ್ಯ ಉಳಿಸಿ, ಸಮಸಮಾಜ ಕಟ್ಟಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು. 

ಶರಣ ಕ್ರಾಂತಿ ಬಳಿಕ ವಚನ ಗ್ರಂಥಗಳನ್ನು ಉಳವಿಗೆ ಸಾಗಿಸಿ, ಸಂರಕ್ಷಿಸಿ ಇಡಲಾಯಿತು. ಹೀಗಾಗಿ ಹೊಳಲ್ಕೆರೆಯಿಂದ ಉಳವಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. 

ಉಪನ್ಯಾಸಕ ಬಿ.ಆರ್. ಮಹಂತೇಶ್, ಬಸ ವಣ್ಣನೇ ಜಗತ್ತಿಗೆ ಒಂದು ಬೆಳಕು. ನಾವಾದರೂ ಪ್ಲಾಸ್ಟಿಕ್, ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು. ಪರಿಸರ ರಕ್ಷಣೆಗೆ ನಮ್ಮಿಂದಲೇ ಮೊದಲ ಹೆಜ್ಜೆ ಆರಂಭವಾಗಬೇಕು. ಬಸವಣ್ಣ ಹನ್ನೆರಡನೇ ಶತಮಾನದಲ್ಲಿಯೇ ಸಮಾಜದ ಪರಿವರ್ತನೆಗೆ ಚಿಂತಿಸಿದವರು. ಸಮಸಮಾಜದ ನಿರ್ಮಾಣಕ್ಕೆ ಬಸವ ತತ್ವ ಅತ್ಯವಶ್ಯ ಎಂದರು. 

ಪರಿಸರ ಚಿಂತಕ ಮಲ್ಲಿಕಾರ್ಜುನ ಸ್ವಾಮಿ, ಮನೆಗಳಿಗೆ ಹಿತ್ತಲು ವ್ಯವಸ್ಥೆ ಇದ್ದದ್ದರಿಂದ ಆರೋಗ್ಯ ಚೆನ್ನಾಗಿತ್ತು. ಆಧುನಿಕತೆಯ ಗೀಳಿನಿಂದಾಗಿ  ಪರಿಸರ ನಾಶ ಮಾಡುತ್ತಿದ್ದೇವೆ. ವಾಹನದ ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಿದೆ. ಕಳೆನಾಶಕದಿಂದಾಗಿ ಅಣು ಜೀವಿಗಳು ಸಾಯುತ್ತವೆ. ಅವಶ್ಯವಿದ್ದಷ್ಟು ರಸಗೊಬ್ಬರ ಬಳಸಬೇಕು. ಪರಿಸರದ ಜಾಗೃತಿ ಮೂಡಿಸಲು ಎಲ್ಲರೂ ಮುಂದಾಗಬೇಕು ಎಂದರು.   

ಗಾಯತ್ರಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕೆ. ಪಿ. ಮರಿಯಾಚಾರ್, ಮುರುಘಾ ಮಠದ ಪರಂಪರೆಗೂ-ಮಾಯಕೊಂಡಕ್ಕೂ ಅವಿನಾಭಾವ ಸಂಬಂಧವಿದೆ. ಇಂಥವರ ಮಾರ್ಗದರ್ಶನ ಸಮಾಜಕ್ಕೆ ಅವಶ್ಯವಿದೆ ಎಂದರು. ಜಗದೀಶ್ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಸನ್ಮಾನಿಸಿ, ವಂದಿಸಿದರು.

ಆವರಗೆರೆ ರುದ್ರಮುನಿ ಪರಿಸರ ಗೀತೆ ಹಾಡಿದರು. ತಾಲ್ಲೂಕು ಕೃಷಿಕ ಸಮಾಜದ ಸದಸ್ಯ ರುದ್ರೇಶ್, ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಗುರುನಾಥ, ರವಿ,  ಮಂಜುನಾಥ, ದಯಾನಂದ, ಲೋಕೇಶ್, ಪಾರಿ ಶಿವು, ಡಾಬಾ ನಾಗರಾಜ್, ನರಗನಹಳ್ಳಿ ಮಹಾ ಲಿಂಗಪ್ಪ, ಹೊನ್ನಾನಾಯಕನ ಹಳ್ಳಿ ಮಲ್ಲೇಶ್, ಬಾವಿಹಾಳ್ ಚಂದ್ರಣ್ಣ ಮತ್ತಿತರರಿದ್ದರು.

error: Content is protected !!