ಮಲೇಬೆನ್ನೂರಿನಲ್ಲಿನ ಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಗೌಡ್ರ ಮಂಜಣ್ಣ ಮನವಿ
ಮಲೇಬೆನ್ನೂರು, ಜ. 22- ಸಣ್ಣ ಪುಟ್ಟ ಅವಕಾಶಗಳನ್ನಾದರೂ ಗಂಗಾಮತ ಸಮಾಜಕ್ಕೆ ಎಲ್ಲಾ ಪಕ್ಷಗಳು ನೀಡಬೇಕೆಂದು ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಮನವಿ ಮಾಡಿದರು.
ಅವರು ಪಟ್ಟಣದ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಸಿಎಂ ಮಾಡಿ ಎಂದು ಕೇಳಲ್ಲ. ನಮ್ಮ ಸಮಾಜಕ್ಕೆ ಎಲ್ಲೆಲ್ಲಿ ಅವಕಾಶ ನೀಡಬೇಕು. ನಮ್ಮ ಸಮಾಜ ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ. ನಾವು ಅಂಬಿಗರ ಚೌಡಯ್ಯನವರಂತೆ ನೇರವಾಗಿ, ನಿಷ್ಟೂರವಾಗಿ ಮಾತನಾಡುತ್ತೇವೆ. ಒಟ್ಟಾರೆ ಸಮಾಜಕ್ಕೆ ಒಳಿತನ್ನೇ ಬಯಸುತ್ತೇವೆ ಎಂದು ಗೌಡ್ರ ಮಂಜಣ್ಣ ಹೇಳಿದರು.
ಪುರಸಭೆ ಸದಸ್ಯ ಸಾಬೀರ್ ಅಲಿ ಮಾತನಾಡಿ, ಶರಣರಲ್ಲೇ ಅತ್ಯಂತ ನಿಷ್ಟೂರವಾದಿ, ನೇರವಾದಿಯಾಗಿದ್ದ ವರು ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯನವರು. ಅವರು ತುಂಬಿದ ಹೊಳೆಯಲ್ಲಿ ಹುಟ್ಟುಹಾಕುವ ಕೆಲಸ ಮಾಡುವುದರ ಜೊತೆಗೆ ಭವಸಾಗರದಲ್ಲೂ ಹುಟ್ಟುಹಾಕುವ ಕೌಶಲ್ಯ ಹೊಂದಿದ್ದರು ಎಂದರು.
ಗಂಗಾಮತ ಸಮಾಜದ ಹೋಬಳಿ ಘಟಕದ ಅಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ಅಂಬಿಗರ ಚೌಡಯ್ಯ ನವರು ತಮ್ಮ ಕಠೋರವಾದ ವಚನಗಳಿಂದಾಗಿ ನಿಜ ಶರಣ ರಾದರು. ಚೌಡಯ್ಯ ದಾನ ಮಾಡಿದ ಪುರ ಗ್ರಾಮವನ್ನು ಚೌಡಯ್ಯದಾನಾಪುರ ಎನ್ನಲಾಗುತ್ತಿದೆ. ಅವರು ನಮ್ಮನ್ನು ಅಗಲಿ 905 ವರ್ಷಗಳಾಗಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್ ಮಾತನಾಡಿ, ಶರಣರ ಜಯಂತಿ ಆಚರಣೆಗಳ ಜೊತೆಗೆ ಅವರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವನ್ನು ಪೋಷಕರು ಮಾಡಬೇಕೆಂದರು.
ಪಿಎಸಿಎಸ್ ಅಧ್ಯಕ್ಷ ಕೆ.ಪಿ. ಗಂಗಾಧರ್ ಮಾತನಾಡಿ, ಶರಣರ ಆಶಯಗಳನ್ನು ನಾವು ಜನ ಸಾಮಾನ್ಯರಿಗೂ ಮುಟ್ಟಿಸುವ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್, ಸದಸ್ಯರಾದ ಕೆ.ಜಿ. ಲೋಕೇಶ್, ನಯಾಜ್, ಮಾಜಿ ಸದಸ್ಯ ಬಿ. ಸುರೇಶ್, ಸಮಾಜದ ಹಿರಿಯರಾದ ಕಣ್ಣಾಳ್ ಪರಸಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿಕುಮಾರ್ ಮಾತನಾಡಿದರು.
ಗಂಗಾಮತ ಸಮಾಜದ ಮುಖಂಡ ಎಂ.ಎನ್. ಮಂಜುನಾಥ್ ಮಾತನಾಡಿ, ಸರ್ವರಿಗೂ ಲೇಸನ್ನೇ ಬಯ ಸಿದ ಶರಣರು, ದಾರ್ಶನಿಕರನ್ನು ಒಂದೊಂದು ಸಮಾಜಕ್ಕೆ ಸೀಮಿತಗೊಳಿಸಿರುವುದು ಬೇಸರದ ಸಂಗತಿ ಎಂದರು.
ಪುರಸಭೆ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪುರಸಭೆಯಲ್ಲಿ ಎಲ್ಲಾ ಶರಣರ, ದಾಸರ, ಕವಿಗಳ, ಮಹಾತ್ಮರ ಜಯಂತಿ ಆಚರಣೆ ಮೂಲಕ ಇಂದಿನ ಯುವ ಜನಾಂಗಕ್ಕೆ ಅವರ ಪರಿಚಯ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷೆ ನಪ್ಸಿಯಾಬಾನು ಚಮನ್ ಷಾ, ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಭೋವಿ ಶಿವು, ಖಲೀಲ್, ಶಬ್ಬೀರ್ ಖಾನ್, ಎ. ಆರೀಫ್ ಅಲಿ, ಬಿ. ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಮಾಜಿ ಸದಸ್ಯರಾದ ಯೂಸೂಫ್ ಖಾನ್, ಪಿ.ಆರ್. ರಾಜು, ಪಿ.ಹೆಚ್. ಶಿವಕುಮಾರ್, ಎ.ಕೆ. ಲೋಕೇಶ್, ಮಾಸಣಗಿ ಶೇಖರಪ್ಪ, ಎಂ.ಬಿ. ರುಸ್ತುಂ, ಸಮಾಜದ ಮುಖಂಡರಾದ ಕಣ್ಣಾಳ್ ಹನುಮಂತಪ್ಪ, ಕಡೇಮನಿ ಕುಮಾರ್, ನಿಟ್ಟೂರು ರಾಮಚಂದ್ರಪ್ಪ, ಕಣ್ಣಾಳ್ ನಾಗರಾಜ್, ಕೆಂಚನಹಳ್ಳಿ ಮಹೇಶ್, ಮಲ್ಲನಾಯ್ಕನಹಳ್ಳಿ ಅಂಬರೀಶ್, ಕುಂಬಳೂರು ವಾಸುದೇವಮೂರ್ತಿ ಮತ್ತಿತರರು ಭಾಗವಹಿಸಿದ್ದರು.