ಮಾನವ ಕುಲಕ್ಕೆ ಉದ್ದಾರದ ಮಾರ್ಗ ತೋರಿದ ಅಂಬಿಗರ ಚೌಡಯ್ಯ

ಮಾನವ ಕುಲಕ್ಕೆ ಉದ್ದಾರದ ಮಾರ್ಗ ತೋರಿದ ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ ಹಾಗೂ ವೇಮನ ಜಯಂತಿಯಲ್ಲಿ ಗಂಗಾಮತ ಸಮಾಜದ ಮುಖಂಡ ಹೇಮಣ್ಣ ಮೋರಿಗೆರೆ

ಹರಪನಹಳ್ಳಿ, ಜ. 21 – ಅಂಬಿಗರ ಚೌಡಯ್ಯ ಸಮಾಜ ಸುಧಾರಣೆಗೆ ನೇರ ನಿಷ್ಠೂರ ವಚನ ರಚಿಸಿ, ಸಮಾಜ ತಿದ್ದುವ ಕೆಲಸ ಮಾಡಿದರೆಂದು ಗಂಗಾಮತ ಸಮಾಜದ ಮುಖಂಡ ಹೇಮಣ್ಣ ಮೋರಿಗೆರೆ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಹಾಗೂ ವೇಮನ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿಜಶರಣ ಚೌಡಯ್ಯ ಸರ್ವರ ಒಳಿತು ಬಯಸಿದ್ದರು, ಸಮಸ್ತ ಮಾನವ ಕುಲದ ಉದ್ದಾರದ ಮಾರ್ಗ ತೋರಿದರು, ಅನುಭವ ಮಂಟಪದಲ್ಲಿ ಚೌಡಯ್ಯ ಯಾವುದೇ ಜಾತಿ ಪರ ನಿಲ್ಲಲಿಲ್ಲ.

ವಚನಗಳ ಮೂಲಕ ಜಾತಿ ವ್ಯವಸ್ಥೆ, ಮೂಢ ನಂಬಿಕೆಯ ವಿರುದ್ದ ಜಾಗೃತಿ ಮೂಡಿಸಲು ಪ್ರಯತ್ನಿಸಿದರು, ವಚನ ಸಾಧನೆ ಮತ್ತು ವ್ಯಕ್ತಿತ್ವವು ಅಗಾಧ ಶಕ್ತಿಯುತವಾಗಿತ್ತು, ಅಂತಹ ಮಹಾನ್ ಶರಣರ ತತ್ವಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಸಮಾಜ ನಿರ್ಮಾಣ ಮಾಡಬೇಕು, ಅಂಬಿಗರ ಸಮಾಜವು 39 ಹೆಸರಿನಿಂದ ಕೂಡಿದ್ದು ಕೋಲಿ, ಕಬ್ಬಲಿಗ, ಮೊಗವೀರ, ಬಾರಿಕ, ಕಬ್ಬೇರ, ತಳವಾರ ಎನ್ನುವ ಹಲವಾರು ವಿಶಿಷ್ಠ ಉಪಜಾತಿಗಳಿಂದ ಕೂಡಿದ್ದು, ಜಿಲ್ಲಾವಾರು ಸಮಾಜದ ಹೆಸರು ಬದಲಾವಣೆಯಾಗಿವೆ.

ಈ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತುಳಿತಕ್ಕೆ ಒಳಗಾದ ಸಮಾಜವಾಗಿದೆ, ಅಂಬಿಗರ ಸಮಾಜವು ಮುಖ್ಯವಾಹಿನಿಗೆ ತರಲು ಜನಪ್ರತಿನಿಧಿಗಳು ಸಹಕರಿಸಬೇಕು, ಕೇವಲ ಚುನಾವಣೆಗಳಲ್ಲಿ ಮತವನ್ನು ಪಡೆಯುವ ವೇಳೆಯಲ್ಲಿ ಮಾತ್ರ ನಾವುಗಳು ದುರ್ಬಳಕೆ ಯಾಗುತ್ತಿದ್ದೇವೆ.

ಮಾತೆ ಮಾಣಿಕ್ಕೇಶ್ವರಿ, ಮಾಜಿ ರಾಷ್ಟಪತಿ ರಾಮನಾಥ ಕೋವಿಂದ್, ಗಂಗೂಬಾಯಿ ಹಾನಗಲ್ ಇನ್ನು ಅನೇಕ ಮಹನೀಯರು ದೇಶದ ಅಭಿವೃದ್ದಿಯಲ್ಲಿ ತಮ್ಮದೇ ಪಾತ್ರ ನಿರ್ವಹಿಸಿದ್ದಾರೆ, ಅಂತಹ ಸಮಾಜವು ಹಲವಾರು ದಶಕಗಳಿಂದ ಎಸ್ಟಿ ಮೀಸಲಾತಿಯನ್ನು ಕೋರಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಧ್ವನಿ ಎತ್ತುವ ಕೆಲಸವಾಗಿದೆ.

ಆದರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಸಮಾಜದ ಮಕ್ಕಳಿಗೆ ಎಸ್ಟಿ ಮೀಸಲಾತಿಯಿಂದ ಸಿಗುವ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ, ಅತ್ಯಂತ ಪ್ರಾಮಾಣಿಕ, ಸ್ವಾಭಿಮಾನದಿಂದ ಜೀವಿಸುತ್ತಿರುವ ಅಂಬಿಗರ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಿ ಸರ್ಕಾರ ಸಹಕರಿಸಬೇಕು ಎಂದರು.

ಈ ವೇಳೆ  ಗಂಗಾಮತ ಸಮಾಜದ ಮುಖಂಡರಾದ ಪವಾಡಿ ಮಲ್ಲಿಕಾರ್ಜುನ್, ಅರಸನಾಳು ಬಸವರಾಜ, ನಿವೃತ್ತ ಶಿಕ್ಷಕ ಶೇಖರಪ್ಪ, ಎ.ಎಂ. ಪದ್ಮಾವತಿ, ಸಿದ್ದಪ್ಪರೆಡ್ಡಿ, ನಾಗರಾಜ್ ಪಾಟೀಲ್ ರವರಿಗೆ ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ  ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು, ಇ.ಓ. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಲೇಪಾಕ್ಷಪ್ಪ, ಕೃಷಿ ಸಹಾಯಕ ನಿರ್ದೇಶಕ ಉಮೇಶ್, ತಾಲ್ಲೂಕು ಗಂಗಾಮತ ಸಮಾಜದ ಉಪಾಧ್ಯಕ್ಷ ಜಾಲಗಾರ ಕೊಟ್ರೇಶ್, ಚಿಗಟೇರಿ ಹಾಲಮ್ಮ, ತಾಲ್ಲೂಕು ಕಾರ್ಯದರ್ಶಿ ಪವಾಡಿ ದೇವೇಂದ್ರಪ್ಪ, ಚಿಗಟೇರಿ ಸುರೇಶ್, ಬಾವಿಹಳ್ಳಿ ಚಂದ್ರಪ್ಪ ಹಾಗೂ ಇತರರಿದ್ದರು.

error: Content is protected !!