ಭೂಮಿ ಉಳಿಸಿಕೊಳ್ಳಲು ರೈತರಿಂದ ಪಾದಯಾತ್ರೆ, ಬೃಹತ್ ಪ್ರತಿಭಟನೆ

ಭೂಮಿ ಉಳಿಸಿಕೊಳ್ಳಲು ರೈತರಿಂದ ಪಾದಯಾತ್ರೆ, ಬೃಹತ್ ಪ್ರತಿಭಟನೆ

ಜಗಳೂರು, ಜ. 20 – ತಾಲ್ಲೂಕಿನ ಗೌಡಗೊಂಡನಹಳ್ಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಬಗರ್‌ಹುಕ್ಕುಂ ಉಳುಮೆ ಮಾಡುತ್ತಿರುವ  ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗೌಡಗೊಂಡನಹಳ್ಳಿ ಗ್ರಾಮದಿಂದ ಶನಿವಾರದಂದು ಪಾದಯಾತ್ರೆ ಮೂಲಕ ಹೊರಟ ಪ್ರತಿಭಟನಾಕಾರರು, ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ, ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಛೇರಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ಕುಳಿತು ಬೃಹತ್ ಧರಣಿ ನಡೆಸಿ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಗೌಡಗೊಂಡನಹಳ್ಳಿ ಗ್ರಾಮದ ಸಮೀಪದಲ್ಲಿನ  83.62 ವಿಸ್ತೀರ್ಣ ಪ್ರದೇಶದ ಪೈಕಿ 11.40 ಹೆಕ್ಟರ್‌ನಷ್ಟು ಪ್ರದೇಶದಲ್ಲಿ 18 ಜನ ಪರಿಶಿಷ್ಟ ಪಂಗಡ, 2 ಜನ ಓಬಿಸಿ ಜನಾಂಗದವರಿಂದ ಒತ್ತುವರಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಲು ಹೊರಟಿರುವುದು ಖಂಡನೀಯ ಎಂದರು.

ಈ ವಿವಾದ ಬಗ್ಗೆ ಡಿಸಿಎಫ್ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ರೈತ ಪರ ಇತ್ಯರ್ಥವಾಗುವ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ. ಕೂಡಲೇ ಅರಣ್ಯ ಪ್ರದೇಶದಲ್ಲಿನ ರೈತರ ಜಮೀನಿನಲ್ಲಿ ನೆಡುತೋಪು ನಿರ್ಮಿಸಲು ನೀಡಿರುವ  ಆದೇಶವನ್ನು ಹಿಂಪಡೆದು, ಯಥಾಪ್ರಕಾರ ಕಾಯ್ದಿರಿಸಿ ಅರ್ಜಿ ಸಲ್ಲಿಸಿದ ರೈತರ ಅರ್ಜಿಗಳನ್ನು ವಿಲೇವಾರಿಗೊಳಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹ ಪಡಿಸಿದರು.

ಜ. 24 ರಂದು ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿಗಳ ಬಳಿ ನಿಯೋಗ ತೆರಳಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.

ಮನವಿ ಸ್ವೀಕರಿಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಉಪವಿಭಾಗ ಅಧಿಕಾರಿಗಳ ನಿರ್ದೇಶನದಂತೆ ಅರಣ್ಯ ಇಲಾಖೆ ಸಮನ್ವಯ ಸಾಧಿಸಿ ಅರಣ್ಯ ಒತ್ತುವರಿ ತೆರವಿಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ರೈತರ ಹೋರಾಟದ ಮನವಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್, ರೈತ ಸಂಘಟನೆ ಮುಖಂಡರಾದ ಚಿರಂಜೀವಿ ಸಿಎಂ ಹೊಳೆ, ರಾಜು ಆಲೂರು, ಪರಶುರಾಮ್, ರವಿ, ಗಂಡುಗಲಿ, ದೇವರಮನಿ ಮಹೇಶ್, ರಾಜನಹಟ್ಟಿ, ಗೌಡಗೊಂಡನಹಳ್ಳಿ ಸತೀಶ್, ಲೋಕೇಶ್, ಕಾನನಕಟ್ಟೆ ತಿಪ್ಪೇಸ್ವಾಮಿ, ಮಾರಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಸಿಪಿಐ  ಹೆಚ್.ಎಸ್. ರಾಷ್ಟ್ರಪತಿ, ಪಿಎಸ್ಐ ಗಾದಿಲಿಂಗಪ್ಪ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

error: Content is protected !!