ಜಗಳೂರು, ಜ. 16 – ಭೂ ಸುರಕ್ಷಾ ಯೋಜನೆಯ ಇ-ದಾಖಲೀಕರಣದಿಂದ ದಾಖಲೆಗಳ ವಂಚನೆಗೆ ಕಡಿವಾಣ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಭೂ ಸುರಕ್ಷಾ ಭೂ ದಾಖಲೀಕರಣಗಳ ಇ-ಖಜಾನೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಗತ್ಯ ದಾಖಲೆಗಳನ್ನು ಪಡೆಯುವಾಗ ಕಛೇರಿಗೆ ಸಾರ್ವಜನಿಕರು ಅಲೆದಾಡಬೇಕಿತ್ತು. ಡಿಜಿಟಲೀಕರಣ ವಿಲ್ಲದ ಸಂದರ್ಭದಲ್ಲಿ ಭೂ ದಾಖಲೆಗಳ ದುರ್ಬಳಕೆ, ವಂಚನೆ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದವು.
ದೇಶಕ್ಕೆ ಮಾದರಿಯಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ್ರು ಅವರ ಸಂಕಲ್ಪದಂತೆ ಜಾರಿಗೊಳಿಸಿದ ಸಾರ್ವಜನಿಕರ ಮತ್ತು ರೈತರ ಪರವಾದ ಭೂ-ಸುರಕ್ಷಾ ಯೋಜನೆ ಅನುಷ್ಠಾನ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಸಾರ್ವಜನಿಕರಿಗೆ ತುರ್ತಾಗಿ ದಾಖಲೆ ತಲುಪಿಸಲು, ಕಛೇರಿಗೆ ಅಲೆದಾಡದಂತೆ ತಾಂತ್ರಿಕವಾಗಿ ಉನ್ನತೀಕ ರಿಸಿ, ಡಿಜಿಟಲೀಕರಣದೊಂದಿಗೆ ಸಾರ್ವಜ ನಿಕರಿಗೆ ಶೀಘ್ರವಾಗಿ ಲಭ್ಯವಾಗುತ್ತವೆ. ತಾಲ್ಲೂಕಿನಲ್ಲಿ 5,70,400 ಪುಟಗಳಿದ್ದು, ಹಂತ ಹಂತವಾಗಿ ಡಿಜಿಟಲೀಕರಣಗೊಳಿಸಲಾಗುವುದು.
ದಾವಣಗೆರೆ ಜಿಲ್ಲೆ ರಾಜ್ಯ ವ್ಯಾಪಿ ಮೊದಲ ಹಂತದಲ್ಲಿ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ಮುಖಂಡರಾದ ಶಂಭುಲಿಂಗಪ್ಪ, ಅಹಮ್ಮದ್ ಗೌಸ್, ಬಿ. ಮಹೇಶ್ವರಪ್ಪ, ರಾಜಸ್ವ ನಿರೀಕ್ಷಕ ಕೀರ್ತಿ ಕುಮಾರ್, ಧನಂಜಯ್ ಮತ್ತು ಸಿಬ್ಬಂದಿ ಇದ್ದರು.