ವಸತಿ ರಹಿತರ ಕಡೆಗಣಿಸಿದ ಸರ್ಕಾರ

ವಸತಿ ರಹಿತರ ಕಡೆಗಣಿಸಿದ ಸರ್ಕಾರ

ಸಿಪಿಐ ಜಿಲ್ಲಾ ಮಂಡಳಿ ಕಾರ್ಯಾಗಾರದಲ್ಲಿ ಸಾತಿ ಸುಂದರೇಶ್

ದಾವಣಗೆರೆ, ಜ. 13- ದೇಶದಲ್ಲಿ ಅನೇಕ ವರ್ಷಗಳಿಂದ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಭರವಸೆ ನೀಡಿ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕಾಳಜಿ ತೋರದೆ ಕಡೆಗಣಿಸುತ್ತಾ ಬಂದಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

ನಗರದ ಕಾಂ. ಪಂಪಾಪತಿ ಭವನದ ಸಭಾಂಗಣದಲ್ಲಿ ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ಆಯೋಜಿಸಿದ್ದ ನಿವೇಶನ ಮತ್ತು ವಸತಿ ರಹಿತರ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಿವೇಶನ ಮತ್ತು ವಸತಿ ರಹಿತರನ್ನು ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ನಿವೇಶನ ಮತ್ತು ವಸತಿ ರಹಿತರನ್ನು ಜಾಗೃತಿಗೊಳಿಸಿ, ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಮತ್ತು ವಸತಿ ರಹಿತರು ಅರ್ಜಿ ಸಲ್ಲಿಸಿ, ರಾಜೀವಗಾಂಧಿ ವಸತಿ ನಿಗಮದಲ್ಲಿ ನೋಂದಣಿ ಮಾಡಿಸಬೇಕು. ಅವರನ್ನು ಸಂಘಟಿಸುವ ಮೂಲಕ ಹೋರಾಟಕ್ಕೆ ಅಣಿಗೊಳಿಸಬೇಕಾದ ಅಗತ್ಯವಿದೆ ಎಂದರು.

ದಲಿತ ಆಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಸ್. ಜನಾರ್ದನ್ ಮಾತನಾಡಿ, ಗ್ರಾಮೀಣ ಮತ್ತು ಪಟ್ಟಣ, ಮಹಾನಗರಗಳ ವ್ಯಾಪ್ತಿಗಳ ಕೊಳಚೆ ಪ್ರದೇಶಗಳ ಕುಟುಂಬಗಳ ಜೀವನ ನಿರ್ವಹಣೆ ಶೋಚನೀಯ ಸ್ಥಿತಿ ತಲುಪಿದೆ ಎಂದು ಹೇಳಿದರು.

ನಿವೇಶನ ಮತ್ತು ವಸತಿ ರಹಿತರಿಗೆ ಪರ್ಯಾಯ ವ್ಯವಸ್ಥೆ ದೊರಕದ ಕಾರಣ ಅನಿವಾರ್ಯವಾಗಿ ತಮ್ಮ ಮಕ್ಕಳೊಂದಿಗಿನ ಬದುಕಿನ ಬಂಡಿ ಹೀನಾಯ ಸ್ಥಿತಿ ತಲುಪಿದ್ದು, ಈ ನಿಟ್ಟಿನಲ್ಲಿ ವಸತಿ ರಹಿತ ಜನರನ್ನು ಗುರುತಿಸಿ ಹೋರಾಟಗಳ ಮೂಲಕ ನ್ಯಾಯ ಕೊಡಿಸಲು ಕಾರ್ಯಕರ್ತರು ಮುಂದಾಗಬೇಕಿದೆ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹ ಕಾರ್ಯದರ್ಶಿ ಹೆಚ್.ಜಿ.ಉಮೇಶ್‌ ಆವರಗೆರೆ, ಖಜಾಂಚಿ ಮಹಮ್ಮದ್ ರಫೀಕ್, ಕಾರ್ಮಿಕ ಮುಖಂಡರಾದ ಹೆಚ್.ಎಂ.  ಸಂತೋಷ್, ರಮೇಶ್ ದಾಸರ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!