ಮಾಯಕೊಂಡ, ಜ. 10 – ಸಮೀಪದ ಅಣಜಿ ಗೊಲ್ಲರಹಳ್ಳಿಯಲ್ಲಿ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ಶುಕ್ರವಾರ ರಾತ್ರಿ ಅಖಂಡ ಭಜನೆ ಏರ್ಪಡಿಸಲಾಗಿತ್ತು. ಶನಿವಾರ ಬೆಳಗಿನ ಜಾವ ವಿಶೇಷ ಪೂಜೆ, ಕೈಂಕರ್ಯಗಳು ಆರಂಭಗೊಂಡವು. ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದವು. ವಿಷ್ಣು ಸಹಸ್ರನಾಮ ಪಠಿಸಲಾಯಿತು. ಭಕ್ತರು ಲಕ್ಷ್ಮಿವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಪುಷ್ಪಾಲಂಕೃತ ವೈಕುಂಠ ಬಾಗಿಲನ್ನು ಪ್ರವೇಶಿಸಿ ಭಕ್ತಿ ಭಾವ ಮೆರೆದರು. ಅಣಜಿ ಗೊಲ್ಲರಹಳ್ಳಿ, ಅಣಜಿ, ಮೆಳ್ಳೇಕಟ್ಟೆ, ಮೂಡೇನಹಳ್ಳಿ, ಗಿರಿಯಾಪುರ, ಜಮ್ಮಾಪುರ, ಕಂದನ ಕೋವಿ, ಕೆರೆಯಾಗಳಹಳ್ಳಿ, ಉಚ್ಚಂಗಿದುರ್ಗ, ಕಂಬತ್ತಹಳ್ಳಿ ಸೇರಿದಂತೆ ಹಲವು ಗ್ರಾಮಗಳ ನೂರಾರು ಭಕ್ತರು ವೈಕುಂಠ ದ್ವಾರದ ಪ್ರವೇಶದಲ್ಲಿ ಸರದಿ ನಿಂತಿದ್ದರು.
ಭಕ್ತರಿಗೆ ಪಂಚಾಮೃತ ಮತ್ತು ಲಡ್ಡು ಪ್ರಸಾದ ವಿತರಿಸಲಾಯಿತು. ಪದ್ಮಾವತಿ ಮತ್ತು ಶ್ರೀಶೈಲ ತಂಡಗಳಿಂದ ನಿರಂತರ ಭಜನೆ ನಡೆಯಿತು. ಧರ್ಮದರ್ಶಿ ಬಿ.ಟಿ. ಸಿದ್ದಪ್ಪ, ಕೆಇಬಿ ಹನುಮಂತಪ್ಪ, ವೆಂಕಟೇಶಪ್ಪ, ಕೃಷ್ಣಪ್ಪ, ಜಿ.ಎಚ್. ಕೃಷ್ಣಪ್ಪ, ವೆಂಕಟರಮಣಪ್ಪ, ತಿಮ್ಮಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.