ಹರಪನಹಳ್ಳಿ, ಜ.8- ಉಡುಪಿ ಜಿಲ್ಲೆಯ ಬೈಂದೂರು ನಗರದಲ್ಲಿ ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಚೂರು ಕೆರೆ ತಾಂಡಾದ ನಾಗರಾಜನಾಯ್ಕ ಅವರ ಪುತ್ರ 7ನೇ ತರಗತಿ ವಿದ್ಯಾರ್ಥಿವಿಕಾಸ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.
ವಿಕಾಸ್ ಅಂತರರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ವಿಕಾಸ ಸದ್ಯ ಉಡುಪಿ ಜಿಲ್ಲೆಯ ಬ್ರಹ್ಮಾವರದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.
ಉಡುಪಿಯ ಶಿಕ್ಷಕ ಅಶೋಕ ಕುಲಾಲ್ ನಡೂರು ಅವರು ವಿದ್ಯಾರ್ಥಿ ವಿಕಾಸರವರಿಗೆ ಕರಾಟೆ ತರಬೇತಿ ನೀಡಿದ್ದಾರೆ.
ವಿಕಾಸ ಈ ಹಿಂದೆ ನಡೆದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ಬಡ ಕುಟುಂಬದಲ್ಲಿ ಜನಿಸಿರುವ ವಿಕಾಸ್ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ನಾಗರಾಜನಾಯ್ಕ್ ಅವರು ಮಲ್ಪೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ, ಕರಾಟೆ ಸ್ಪರ್ಧೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ವಿಕಾಸ್‌ಗೆ ಸರ್ಕಾರ ಉತ್ತಮ ತರಬೇತಿ, ಆರ್ಥಿಕ ನೆರವು ನೀಡಬೇಕಿದೆ ಎಂದು ಕುಂಚೂರು ಕೆರೆ ತಾಂಡಾದ ಶಿಕ್ಷಕ ಕೆ.ಧರ್ಮನಾಯ್ಕ್ ತಿಳಿಸಿದ್ದಾರೆ.