ಶರೀರ, ಬುದ್ಧಿ, ವಿವೇಕದ ಸಮತೋಲನದಿಂದ ಸಾರ್ಥಕ ಬದುಕು

ಶರೀರ, ಬುದ್ಧಿ, ವಿವೇಕದ ಸಮತೋಲನದಿಂದ ಸಾರ್ಥಕ ಬದುಕು

ಸೋಮೇಶ್ವರೋತ್ಸವ ಸಮಾರೋಪದಲ್ಲಿ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು

ದಾವಣಗೆರೆ, ಜ.5- ಮನುಷ್ಯನ ಬದುಕು ಸಾರ್ಥಕವಾಗಲು ಶರೀರ, ಬುದ್ಧಿ ಹಾಗೂ ವಿವೇಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬೇಕು ಎಂದು ಕಣ್ವಕುಪ್ಪೆ ಗವಿಮಠದ ಡಾ. ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸೋಮೇಶ್ವರೋತ್ಸವ-2025ರ ಸಮಾರೋಪದಲ್ಲಿ ತಾಯಿ ಭಾರತಾಂಭೆ ಹಾಗೂ ಸರಸ್ವತಿ ದೇವಿಗೆ ಪುಷ್ಪಾರ್ಚನೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಜ್ಞಾನ ಸಂಪತ್ತೇ ಬಹುದೊಡ್ಡದು. ಪಂಚ ಕರ್ಮೇಂದ್ರಿಯ, ಪಂಚ ಜ್ಞಾನೇಂದ್ರಿಯ ಹಾಗೂ ಪಂಚ ತನ್ಮಾತ್ರೆಗಳಿಗೆ ಮತಿಯನ್ನು ಕೊಡುವುದೇ ಜ್ಞಾನ. ಈ ನಿಟ್ಟಿನಲ್ಲಿ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬುದನ್ನು ಜ್ಞಾನ ಶಕ್ತಿಯಿಂದ ನಾವು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ಋಣ ಪಂಚಕಗಳಾದ ಮಾತೃ ಋಣ, ಪಿತೃ ಋಣ, ದೈವ ಋಣ, ಗುರು ಋಣ ಹಾಗೂ ಸ್ವಗ್ರಾಮದ ಋಣ ಯಾರೂ ಮರೆಯಬಾರದು ಎಂದ ಅವರು, ತಂದೆ-ತಾಯಿಯರ ಮಾತಿಗೆ ಬೆಲೆ ಕೊಟ್ಟು ನಡೆದರೆ ಅವರ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.

ಸನಾತನ ಧರ್ಮ, ಪರಂಪರೆ ಹಾಗೂ ದೇಶ ಸೇವೆಯ ಗುಣ ಹೊಂದಿದ ಸದ್ಗುಣಿಗಳ ಸಂಘ ಮಾಡುವುದರಿಂದ ಜೀವನದಲ್ಲಿ ಶ್ರೇಷ್ಠ ಮಾರ್ಗ ಲಭಿಸಲಿದೆ ಎಂದು ತಿಳಿಸಿದರು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಜೀವಿತಾವಧಿಯಲ್ಲಿ ಎಲ್ಲರಿಗೂ ಒಳಿತನ್ನು ಮಾಡುತ್ತಾ ಧರ್ಮಪರ ಕಾರ್ಯ ನಿರ್ವಹಿಸಬೇಕು ಎಂದು ಎಲ್ಲರಿಗೂ ಕಿವಿಮಾತು ಹೇಳಿದರು.

ಡಿಡಿಪಿಐ ಕೊಟ್ರೇಶ್‌ ಜಿ. ಮಾತನಾಡಿ, ಪಾಲಕರು ತಮ್ಮ ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯಬೇಕು. ಅವರ ವಿದ್ಯಾಭ್ಯಾಸದ ಬಗ್ಗೆ ದಿನನಿತ್ಯ ಪರಿಶೀಲಿಸುವ ಜತೆಗೆ ಅವರಲ್ಲಿ ಮೌಲ್ಯ, ಸಂಸ್ಕೃತಿ, ಸಂಸ್ಕಾರಗಳ ಹೆಚ್ಚಿಸಲು ಅರಿವು ಮೂಡಿಸಬೇಕು ಎಂದು ಹೇಳಿದರು.

ಪಾಲಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾವಹಿಸಬೇಕು. ಅವರು ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಸರಿದಾರಿಗೆ ತರುವಂತೆ ತಿದ್ದಿ ತೀಡುವ ಕಾರ್ಯ ಪಾಲಕರು ಹಾಗೂ ಶಿಕ್ಷಕರಿಂದ ಆಗಬೇಕು ಎಂದು ಹೇಳಿದರು.

ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಮಕ್ಕಳು ವಿದ್ಯಾವಂತರಾದರೆ ಅವರ ಮನೆತನ ಸೇರಿದಂತೆ ದೇಶವೂ  ಅಭಿವೃದ್ಧಿಯಾಗಲಿದೆ. ಹಾಗಾಗಿ ಇದರ ಜತೆಗೆ ವಿದ್ಯಾರ್ಥಿಗಳು ಸಂಪ್ರದಾಯ, ಸಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಗಳ ಬಗೆಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಚಿತ್ರನಟ ರಮೇಶ್‌ ಅರವಿಂದ್‌ ಅವರು, ಹಿರಿಯ ಪತ್ರಕರ್ತ ರಮೇಶ್‌ ಜಹಗೀರದಾರ್‌, ದೇವಿಕಾ ಸುನೀಲ್‌, ಕೆ. ಸುಮತಿ ಮತ್ತು ಗೌರಮ್ಮ ಕಲಿವೀರಪ್ಪ ಅವರಿಗೆ `ಸೋಮೇಶ್ವರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ಮಳಲಕೆರೆ ಗುರುಮೂರ್ತಿ ಅವರಿಗೆ `ಸೋಮೇಶ್ವರ ಶಿಕ್ಷಣ ಸಿರಿ’ ನೀಡಲಾಯಿತು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಕೆ.ಎಂ ಸುರೇಶ್‌, ಹೆಚ್‌.ಆರ್. ಅಶೋಕ್ ರೆಡ್ಡಿ, ಮಾಜಿ ಸೈನಿಕ ಸಿದ್ಧಯ್ಯ, ಮುಖ್ಯ ಶಿಕ್ಷಕಿ ಗಾಯತ್ರಿ, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌, ಪಿ.ಎನ್‌. ಪರಮೇಶಪ್ಪ, ಜಯಶ್ರೀ ಹಾಗೂ ಇತರರು ಇದ್ದರು.

error: Content is protected !!