ಕೆಲವು ಕುಚೋದ್ಯ ಶಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಬೇರ್ಪಡಿಸಿ, ಬಣ ರಾಜಕೀಯ ಮಾಡುತ್ತಿವೆ

ಕೆಲವು ಕುಚೋದ್ಯ ಶಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಬೇರ್ಪಡಿಸಿ, ಬಣ ರಾಜಕೀಯ ಮಾಡುತ್ತಿವೆ

ಕರ್ನಾಟಕ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಷನ್‌ ಅಧ್ಯಕ್ಷ ಅಮ್ಜದ್ ಖಾನ್ ಅಸಮಾಧಾನ

ದಾವಣಗೆರೆ, ಜ. 5- ದಾವಣಗೆರೆಯಲ್ಲಿ ಕೆಲವು ಕುಚೋದ್ಯ ಶಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಬೇರ್ಪಡಿಸಿ, ಬಣ ರಾಜಕೀಯ ಮಾಡುತ್ತಿವೆ ಎಂದು ಕರ್ನಾಟಕ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಷನ್‌ ಅಧ್ಯಕ್ಷ ಅಮ್ಜದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕಾಂ. ಪಂಪಾಪತಿ ಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಷನ್‌ನ ರಾಜ್ಯ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್.ಕೆ. ರಾಮಚಂದ್ರಪ್ಪ ಎಂದರೇನೆ ಸಿಪಿಐ, ಎಐಟಿಯುಸಿ ಸಂಘಟನೆ, ಸಂಘದಲ್ಲಿ ಬಣ ಸೃಷ್ಟಿಸಿ ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆದಿದೆ. ದುಸ್ಸಾಹಸ ಮಾಡಲಾಗಿದೆ. ಇತರೆ ರಾಜಕೀಯ ಪಕ್ಷಗಳು ಇದರ ಲಾಭ ಪಡೆಯಲು ಮುಂದಾಗಿವೆ ಎಂದು ವಿಷಾದಿಸಿದರು.

105 ವರ್ಷದ ಎಐಟಿಯುಸಿ ಸಂಘಟನೆ ಚಾರಿತ್ರ್ಯಿಕ ಹೋರಾಟದಲ್ಲಿ ನಿರತವಾಗಿದೆ. ದೇಶದ ಸ್ವಾತಂತ್ರ್ಯ, ಸಮಗ್ರತೆ ಏಕತೆಗಾಗಿ ಮುಡುಪಿಟ್ಟ ಏಕೈಕ ಸಂಘಟನೆಯಾಗಿದೆ. ದುಡಿಯುವ ಜನರ ಪರವಾಗಿ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ರೂಪಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಹಿಳಾ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನ್ನ ಸಾಮಂತ ಹಾಗೂ ಬಂಡವಾಳಶಾಹಿ ಕಂಪನಿಗಳ ಪರ ಕೆಲಸ ಮಾಡುತ್ತಿವೆ. ಪ್ರಾಮಾಣಿಕವಾಗಿ ದುಡಿಯುವ ಕಾರ್ಮಿಕರ ಶ್ರಮವನ್ನು ಶೋಷಣೆ ಮಾಡುತ್ತಿವೆ. ಕಾರ್ಮಿಕರ ಪರ ರಕ್ಷಣಾತ್ಮಕ ನಿರ್ಣಯಗಳ ಬದಲಾಗಿ ಏಕಸ್ವಾಮ್ಯ ಉದ್ಯಮದ ಪರವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ ಮಾತನಾಡಿ,, ಸಂಘಟನೆ ಹೆಸರಿನಲ್ಲಿ ವ್ಯಕ್ತಿ ಪೂಜೆ ಮಾಡುವ ಬಣ ರಾಜಕಾರಣದ ಸವಾಲನ್ನು ಕಾರ್ಮಿಕರು ಸ್ವೀಕರಿಸಬೇಕಿದೆ. ನಮ್ಮ ನಾಯಕರ ಹೆಸರನ್ನು ದುರ್ಬಳಕೆ ಮಾಡಿ ಸಂಘ ವಿಘಟನೆ ಮಾಡುವ ಪ್ರಯತ್ನ ನಡೆದಿರುವುದು ಅಕ್ಷಮ್ಯ ಎಂದರು.

ದುರಾಸೆಯಿಂದ ಕೆಟ್ಟ ಆಲೋಚನೆ ಇಟ್ಟುಕೊಂಡು ಕೆಲಸ ಮಾಡುವ ವ್ಯಕ್ತಿಗಳನ್ನು ಸಂಘಟನೆಯ ರಾಜ್ಯ ಸಮಿತಿ ಉಚ್ಛಾಟನೆ ಮಾಡಿದೆ. ಪ್ರತಿಭಟನೆ, ಹೋರಾಟಕ್ಕೆ ಬಾರದೇ ಕೇವಲ ಹೆಸರಿಗೆ ಬರುವ ನಾಯಕರು ನಮ್ಮ ಸಂಘಟನೆಗೆ ಬೇಕಾಗಿಲ್ಲ ಎಂದು ಹೇಳಿದರು.

ಬ್ಯಾಂಕ್ ನೌಕರರ ಸಂಘದ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುವ ಸಂಘಟನೆಗಳು ಸೈದ್ಧಾಂತಿಕವಾಗಿ ಬೆಳೆಯಬೇಕೇ ವಿನಃ ವ್ಯಕ್ತಿ ಆಧಾರಿತ ಆಗಬಾರದು ಎಂದು ಹೇಳಿದರು.

ದಾವಣಗೆರೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸ್ಥಳ, ಎಐಟಿಯುಸಿ, ಸಿಪಿಐ ಪಕ್ಷಗಳು ತಮ್ಮನ್ನು ತಾವು ಯಾವತ್ತೂ ರಾಜಕೀಯ ನಾಯಕರಂತೆ ಭಾವಿಸಲಿಲ್ಲ. ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಾ, ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಪಕ್ಷದ ಹೆಚ್.ಕೆ. ರಾಮಚಂದ್ರಪ್ಪ ಅವರಿಗೆ ಅಧಿಕಾರ ದಾಹ ಇರಲಿಲ್ಲ ಎಂದರು. ಯಾವುದೇ ಶಕ್ತಿಗಳು ನಮ್ಮ ಹೋರಾಟದ ದಿಕ್ಕನ್ನು ಬದಲಿಸಲು ಸಾಧ್ಯವಿಲ್ಲ. ಆದಕಾರಣ ಯಾವುದೇ ಕಾರಣಕ್ಕೂ ಕಾರ್ಮಿಕರು ಎದೆಗುಂದದೆ ಮುತುವರ್ಜಿಯಿಂದ ಕೆಲಸ ಮಾಡಿ ಎಂದು ಹೇಳಿದರು.

ರಾಜ್ಯ ಸಮಿತಿ ಸಭೆಯಲ್ಲಿ ಮುಖಂಡರಾದ ಆವರಗೆರೆ ಚಂದ್ರು, ರತ್ನಾ ಶಿರೂರು, ಎಂ. ಜಯಮ್ಮ, ಗಿರಿಜಾ, ಎಸ್.ಮಲ್ಲಮ್ಮ, ಮಹ್ಮದ್ ಭಾಷಾ ಇತರರಿದ್ದರು.

error: Content is protected !!