ದಾವಣಗೆರೆ, ಜ..3- ಜೆ.ಎಂ.ಇಮಾಂ ಟ್ರಸ್ಟ್ ಜಗಳೂರು, ಜೆ.ಎಂ. ಇಮಾಂ ಸ್ಮಾರಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಜೆ.ಎಂ.ಇಮಾಂ ಸ್ಮಾರಕ 6 ನೇ ವರ್ಷದ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಾಳೆ ದಿನಾಂಕ 4 ರ ಶನಿವಾರ ಸಂಜೆ 4 ಗಂಟೆಗೆ ಜೆ.ಎಂ. ಇಮಾಂ ಶಾಲೆಯ ಆವರಣದಲ್ಲಿರುವ ಜಗಳೂರಿನ ಸಂತ ಶಿಶುನಾಳ ಷರೀಫ್ ಸಾಹೇಬ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಶಸ್ತಿ ಸಲಹಾ ಸಮಿತಿ ಅಧ್ಯಕ್ಷ ಎನ್.ಟಿ.ಯರ್ರಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಮಾರಂಭ ಉದ್ಘಾಟಿಸಲಿದ್ದು, ಟ್ರಸ್ಟ್ ಗೌರವಾಧ್ಯಕ್ಷ ಜೆ.ಕೆ.ಹುಸೇನ್ ಮಿಯಾಸಾಬ್ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 50 ಸಾವಿರ ರೂ. ನಗದು, ಪ್ರಶಸ್ತಿ, ಸ್ಮರಣಿಕೆಯನ್ನು ಹೊಂದಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಬಿ. ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ
ಈ. ಹಾಲಮೂರ್ತಿ, ರಾಜ್ಯ ಪಿಂಜಾರ್ (ನದಾಪ್)ಸಂಘದ ಜಗಳೂರು ಅಧ್ಯಕ್ಷ ಜಲೀಲ್ ಸಾಬ್, ಉದ್ಯಮಿ ಹೆಚ್.ಇ. ದಾದಾ ಖಲಂದರ್, ಜೆ.ಎಂ. ಇಮಾಂ ಟ್ರಸ್ಟ್ ಅಧ್ಯಕ್ಷ ಎಸ್.ಹೆಚ್. ಮಸ್ತಾನ್ ಸಾಬ್, ಖಜಾಂಚಿ ಜೆ.ಕೆ. ಮಹಮ್ಮದ್ ಷರೀಫ್ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್. ಹಾಲಪ್ಪ, ಆರ್ ಖಾಸೀಂಸಾಬ್, ದಾದಾಪೀರ್ ನವಿಲೇಹಾಳ್ ಉಪಸ್ಥಿತರಿದ್ದರು.