ಮೊಳಕಾಲ್ಮೂರು, ಡಿ. 29 – ಫೆಬ್ರವರಿ 15ರಿಂದ 17ರ ವರೆಗೆ 3ದಿನಗಳ ಕಾಲ `ಗಡಿನಾಡ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಸಿದ್ದಯ್ಯನ ಕೋಟೆ ಚಿತ್ತರಗಿಯ ವಿಜಯ ಮಹಾಂ ತೇಶ್ವರ ಸಂಸ್ಥಾನ ಶಾಖಾ ಮಠ ಹಾಗೂ ಚಿತ್ತರಗಿ ಸಾಂಸ್ಕೃತಿಕ ಕಲಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಮಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದಯ್ಯನ ಕೋಟೆಯಲ್ಲಿ ಕಳೆದ 26 ವರ್ಷಗಳಿಂದ ನಾಡಿನ ಮಠಾಧೀಶರು, ಅನುಭವಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಸೇರಿದಂತೆ ರಾಜ್ಯದ ಹಲವು ಕಲಾತಂಡಗಳನ್ನ ಕರೆಸಿ ವಿಶೇಷವಾಗಿ ಗಡಿನಾಡ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಸಹ ಅತ್ಯಂತ ವಿಜೃಂಭಣೆಯಿಂದ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಬಸವ ಕೇಂದ್ರದ ಉಪಾಧ್ಯಕ್ಷ ಕೆ. ಚಂದ್ರಪ್ಪ ಮಾತನಾಡಿ, ಶ್ರೀಗಳು ಸತತ 26 ವರ್ಷಗಳಿಂದ ಈ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಅಲ್ಲದೆ, ನೂರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಅನ್ನ ದಾಸೋಹ ಮಾಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ. ಹೀಗಾಗಿ, ನಾವೆಲ್ಲರೂ ದಾಸೋಹಕ್ಕೆ ಸೇವೆಯನ್ನು ಸಲ್ಲಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಪೂಜ್ಯರ ಕೃಪೆಗೆ ಪಾತ್ರರಾಗೋಣ ಎಂದು ಆಶಯ ವ್ಯಕ್ತ ಪಡಿಸಿದರು.
ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಮಾತನಾಡಿ, ಶ್ರೀಮಠದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಧಕರನ್ನು ಕರೆಸಿ ಗೌರವಿಸಲಾಗುವುದು. ಅಲ್ಲದೆ 3 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಸಿದ್ದಯ್ಯನ ಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ತಾಲ್ಲೂಕಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು, ಮನ, ಧನ ಅರ್ಪಿಸುವ ಮೂಲಕ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ಸ್ಥಳೀಯ ಮುಖಂಡರಾದ ತಿಪ್ಪೇಸ್ವಾಮಿ, ಲಕ್ಷ್ಮಣ್ ಸೇರಿದಂತೆ ಮಠದ ಭಕ್ತರು, ಗ್ರಾಮಸ್ಥರು ಇದ್ದರು.