ದಾವಣಗೆರೆ, ಡಿ. 29- ಕರ್ನಾಟಕ ಲೋಕಸೇವಾ ಆಯೋಗದಿಂದ ಡಿಸೆಂಬರ್ 29 ರಂದು ನಡೆದ ಮರು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ, ಬಿ ವೃಂದದ ಪೂರ್ವಭಾವಿ ಪರೀಕ್ಷೆ ದಾವಣಗೆರೆಯ 19 ಕೇಂದ್ರಗಳಲ್ಲಿ ಮೊದಲ ಹಾಗೂ ಎರಡನೇ ಪತ್ರಿಕೆ ಪರೀಕ್ಷೆ ಸುಗಮವಾಗಿ ನಡೆದಿದೆ. ಒಟ್ಟು 19 ಕೇಂದ್ರಗಳಲ್ಲಿ 8,395 ಅಭ್ಯರ್ಥಿಗಳು ನೊಂದಾಯಿಸಿದ್ದು. ಮೊದಲ ಪತ್ರಿಕೆಗೆ ,4006 ಅಭ್ಯರ್ಥಿಗಳು ಹಾಜರಾಗಿ 4,389 ಅಭ್ಯರ್ಥಿಗಳು ಗೈರು, ಎರ ಡನೇ ಪತ್ರಿಕೆಗೆ 3,980 ಅಭ್ಯರ್ಥಿಗಳು ಹಾಜರಾಗಿ 4,415 ಅಭ್ಯರ್ಥಿಗಳು ಗೈರು ಹಾಜರಾಗಿ ದ್ದಾರೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ.ತಿಳಿಸಿದ್ದಾರೆ.
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ ಭದ್ರತೆಯನ್ನು ಕಲ್ಪಿಸಿತ್ತು. ಪರೀಕ್ಷೆ ಪ್ರಾರಂಭವಾಗುವುದಕ್ಕೂ ಒಂದು ಗಂಟೆಗೂ ಮೊದಲೇ ಅಭ್ಯರ್ಥಿಗಳು ಕೇಂದ್ರಕ್ಕೆ ಬಂದಿದ್ದರು. ಪ್ರತಿಯೊಬ್ಬರನ್ನು ಪರಿಶೀಲಿಸಿ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಯಿತು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಗಳಿಗೆ ಮೊದಲೇ ನಿರ್ದೇಶನಗಳನ್ನು ನೀಡಲಾಗಿತ್ತು. ತುಂಬು ತೋಳಿನ ಅಂಗಿ ಧರಿಸಿ ಬಂದಿದ್ದವರಿಗೆ ಪ್ರವೇಶ ಕಲ್ಪಿಸಲಿಲ್ಲ. ಬಟ್ಟೆಯನ್ನು ಕೂಲಂಕಶವಾಗಿ ಪರಿಶೀಲಿಸಿ, ಕಿವಿಗಳಿಗೆ ಟಾರ್ಚ್ ಹಾಕಿ ನೋಡುತ್ತಿದ್ದ ದೃಶ್ಯ ಕಂಡುಬಂದಿತು. ಕಿವಿಯೋಲೆ, ಕೊರಳ ಚೈನು, ಕೈಗೆ ಹಾಕಿದ ದಾರಗಳನ್ನು ಬಿಚ್ಚಿಸಲಾಯಿತು. ಬೆಲ್ಟ್ ಚಪ್ಪಲಿ ಧರಿಸಿ ಬಂದಿದ್ದವರು ಬರಿಗಾಲಲ್ಲಿ ಕೊಠಡಿಗೆ ತೆರಳಿದ ದೃಶ್ಯ ಕಂಡುಬಂದಿತು.