ಹೊಂದಾಣಿಕೆ ಕೊರತೆ : ವಿಚ್ಛೇದನ ಪ್ರಕರಣಗಳ ಹೆಚ್ಚಳಕ್ಕೆ ಕಾರಣ

ಹೊಂದಾಣಿಕೆ ಕೊರತೆ : ವಿಚ್ಛೇದನ ಪ್ರಕರಣಗಳ ಹೆಚ್ಚಳಕ್ಕೆ ಕಾರಣ

ಹಾಲಿವಾಣ : ದೊಡ್ಡಎಡೆ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ರಟ್ಟಿಹಳ್ಳಿ ಶ್ರೀ ಬೇಸರ

ಮಲೇಬೆನ್ನೂರು, ಡಿ.29 – ಹೆಣ್ಣು ಮಕ್ಕಳ ಪೋಷಕರು ವಿವಾಹಕ್ಕೂ ಮುನ್ನ ಉತ್ತಮ ಸಂಸ್ಕಾರ ಇರುವ ಕುಟುಂಬದ ಹುಡುಗನನ್ನು ಹುಡುಕಿ ವಿವಾಹ ಮಾಡಿ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

 ಅವರು ಶುಕ್ರವಾರ ಹಾಲಿವಾಣ ಶ್ರೀ  ಬೀರಲಿಂಗೇಶ್ವರ ಸ್ವಾಮಿಯ ಮರಿಬನ್ನಿ ಅಂಗವಾಗಿ ಜರುಗಿದ ದೊಡ್ಡಎಡೆ ಜಾತ್ರೆ ಮತ್ತು ಸಾಮೂಹಿಕ ವಿವಾಹದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದುಡಿದು ತಿನ್ನುವ ಮತ್ತು ಸರಳ ಜೀವನ ನಡೆಸುವವರನ್ನು ಆಯ್ಕೆ ಮಾಡುವುದು ಪ್ರಸಕ್ತ ದಿನಮಾನದಲ್ಲಿ ಅನಿವಾರ್ಯವಾಗಿದೆ. ಇತ್ತೀಚೆಗೆ ವಿದ್ಯಾವಂತ ದಂಪತಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು. 

ಅಡಿಕೆ ತೋಟ, ಚಿನ್ನಾಭರಣ, ಕಾಫಿ ತೋಟ, ಬಂಗಲೆ ಮತ್ತು ವಿದೇಶ ಉದ್ಯೋಗ, ಸಾಫ್ಟವೇರ್‌ ಉದ್ಯೋಗಕ್ಕೆ ಮರುಳಾಗಬೇಡಿ.  ಕುಡುಕರಿಗೆ ಕನ್ಯಾದಾನ ಮಾಡಬೇಡಿ ಎಂದು ನೇರವಾಗಿ ಹೇಳಿದ ರಟ್ಟಿಹಳ್ಳಿ ಶ್ರೀಗಳು, ನವಜೋಡಿ ಸಂಸ್ಕಾರದೊಂದಿಗೆ ಸರಳ ಬದುಕು ರೂಪಿಸಿಕೊಂಡು ಜೀವನ ನಡೆಸಿ ಎಂದರು.

ಮಾಜಿ ಸಚಿವ ಡಾ. ವೈ. ನಾಗಪ್ಪನವರ ಪುತ್ರಿ ಡಾ. ರಶ್ಮಿ  ಮಾತನಾಡಿ, ಗಂಡು, ಹೆಣ್ಣು ಎಂಬ ಭೇದಭಾವ ಮಾಡಬೇಡಿ ಎಂದ ಅವರು ಹೆಣ್ಣು ಭ್ರೂಣ ಹತ್ಯೆ  ಖಂಡಿಸಿದರು.

ಶಿಕಾರಿಪುದ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಾಕುಮಾರಿ ಸ್ನೇಹ ಮಾತನಾಡಿ, ನವ ದಂಪತಿಗಳು ಆದರ್ಶ ಜೀವನ ನಡೆಸಿ ಎಂದು ಹಾರೈಸಿದರು.

ಹದಡಿ ಚಂದ್ರಗಿರಿ ಮಠದ ಸದ್ಗುರು ಶ್ರೀ ಮುರಳಿಧರ ಸ್ವಾಮೀಜಿ, ಬ್ರಹ್ಮಾಕುಮಾರಿ ಶಾಂತಕ್ಕ, ಮಾತನಾಡಿದರು. ಈ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ಜೋಡಿಗಳಿಗೆ ದಾನಿಗಳು ನೀಡಿದ ಬಟ್ಟೆ ಹಾಗೂ ಗೃಹ ಬಳಕೆ ಸಾಮಾನುಗಳನ್ನು ನೀಡಲಾಯಿತು. 

ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಜಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ. ಕುರುಬ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ ನಾಗೇಂದ್ರಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ದೇವಿ ಮಂಜುನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಡಿವಾಳರ ಬಸವರಾಜ್, ಮುಖಂಡರಾದ ಕುಂಬ ಳೂರು ವಿರುಪಾಕ್ಷಪ್ಪ, ಸಿ.ಎನ್. ಹುಲುಗೇಶ್,  ಕೆ.ಪಿ. ಕುಮಾರಸ್ವಾಮಿ, ಕೆ.ಪಿ. ಗಂಗಾಧರ್, ಪಿ.ಆರ್. ಕುಮಾರ್, ಪಿ.ಹೆಚ್. ಶಿವಕುಮಾರ್, ಭೋವಿ ಕುಮಾರ್, ಪಿ.ಆರ್. ರಾಜು ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು. ಗೊಂದೇರ ರೇವಣಪ್ಪ ಸ್ವಾಗತಿಸಿದರು, ಕೆ.ಎಂ. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಿ.ಡಿ. ಚಿಕ್ಕಣ್ಣ ನಿರೂಪಿಸಿದರು. ಎಸ್.ಇ. ಹಾಲೇಶ್ ವಂದಿಸಿದರು.

error: Content is protected !!