ದಾವಣಗೆರೆ, ಡಿ. 29 – ತುಮಕೂ ರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆ ಸಂಪರ್ಕಿಸುವ ನೂತನ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯ ಗೊಳಿಸಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು, ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದೆ.
ಹೊಸ ರೈಲು ಮಾರ್ಗದ ಅಂತಿಮ ಸಮೀಕ್ಷೆ ಮುಗಿದಿದೆ. ಈ ರೈಲು ಮಾರ್ಗ ನಿರ್ಮಾಣದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಬೆ೦ಗಳೂರಿನಿ೦ದ ಚಿತ್ರದುರ್ಗಕ್ಕೆ 110 ಕಿ.ಮೀ. ಅ೦ತರ ಕಡಿಮೆಯಾಗುತ್ತದೆ.
ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವೆ ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳಲ್ಲಿ ಶೇ.35ರಷ್ಟು ಸಂಚಾರ ಕಡಿಮೆಯಾಗುತ್ತದೆ.
ದೂರ ಕಡಿಮೆ ಆಗುವುದರಿಂದ ಇಂಧನ ಮತ್ತು ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ ಹಾಗೂ ಐತಿಹಾಸಿಕ ಚಿತ್ರದುರ್ಗದ ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
ಪ್ರಸ್ತುತ ಹರಿಹರ-ಬೀರೂರು-ಅರಸಿಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆ ಆಗುವುದರಿಂದ ಹೆಚ್ಚಿನ ಸರಕು ಸಾಗಣೆ ಮಾಡಲು ಅನುಕೂಲವಾಗಲಿದೆ.
ದಾವಣಗೆರೆ, ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಹಾಗೂ ಊರಕೇರೆಗೆ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.