ದಾವಣಗೆರೆ, ಡಿ. 29 – ಗಣಿತವೆಂದರೆ ಅಭ್ಯಾಸ ಮಾಡುವುದಲ್ಲ, ಗಣಿತವೆಂದರೆ ಕಾರ್ಯನಿರ್ವಹಿಸುವುದು ಹಾಗೂ ಗಣಿತವಿಲ್ಲದೆ ಜೀವನವಿಲ್ಲ ಎಂದು ಬೆಸ್ಟ್ ಪೇಪರ್ ಪ್ರೆಸೆಂಟೇಷನ್ ಅವಾರ್ಡ್ ಪಡೆದಿರುವ ಬೆಂಗಳೂರಿನ ರಾಮಯ್ಯ ಯುನಿವರ್ಸಿಟಿ ಆಫ್ ಅಫ್ರೆಡ್ ಸೈನ್ಸಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವೇಣು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.
ಅವರು ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಭಾರತದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಇವರ ಜನ್ಮದಿನವನ್ನು ಗುರುತಿಸಲು ಪ್ರತೀ ವರ್ಷ ಡಿಸೆಂಬರ್ 24ರಂದು ಆಚರಿಸಲಾಗುವ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮದಲ್ಲಿ ದಿ ಎಸೆನ್ಸ್ ಆಫ್ ಮ್ಯಾಥಮೆಟಿಕ್ಸ್ ಎಂಬ ವಿಷಯದಡಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಜ್ಯಾಮಿಟ್ರಿಕ್ ಮೀನಿಂಗ್ ಆಫ್ ಡಿಟರ್ಮಿನೆಂಟ್ಸ್, ಅಪ್ಲಿಕೇಷನ್ ಆಫ್ ಪಾರ್ಷಿಯಲ್ ಡಿಫರೆಂಟೇಷನ್, ಇಂಪಾರ್ಟೆನ್ಸ್ ಆಫ್ ಸೀರೀಸ್ ವಿಷಯದ ಮೇಲೆ ಉಪನ್ಯಾಸ ನೀಡಿದ ನಂತರ ವಿದ್ಯಾರ್ಥಿನಿಯರು ರಚಿಸಿದ್ದ ಮಾಡೆಲ್‌ಗಳನ್ನು ವೀಕ್ಷಿಸಿ, ಅವುಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು.
ಪ್ರಾಂಶುಪಾಲರಾದ ಶ್ರೀಮತಿ ಕಮಲಾ ಸೊಪ್ಪಿನ್ ಮಾತನಾಡಿ, ನಾವು ಗಣಿತವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು, ಜೀವನದ ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಲ್ಲೆವು ಮತ್ತು ಗಣಿತವು ಭೌತಶಾಸ್ತ್ರ ವಿಷಯದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದಿವ್ಯಶ್ರೀ ಜಿ. ಇವರು ಭಾರತದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಇವರ ಜನ್ಮ ದಿನದ ಗುರುತಿಗಾಗಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ಗಣಿತ ದಿನ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಣಿತ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರಂಜಿತ ಆರ್. ಸ್ಥಾನಿಕ್ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ಜೆ. ದಾನೇಶ್ವರಿ ವಂದಿಸಿದರು.