ಜಾತಿ, ಧರ್ಮದ ಕನ್ನಡಕ ಕಳಚಿದರೆ ಭಾವೈಕ್ಯತೆ – `ಸರ್ವಧರ್ಮ ಸಮನ್ವಯ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ

ಜಾತಿ, ಧರ್ಮದ ಕನ್ನಡಕ ಕಳಚಿದರೆ ಭಾವೈಕ್ಯತೆ – `ಸರ್ವಧರ್ಮ ಸಮನ್ವಯ  ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ

ಜಗಳೂರು, ಡಿ. 25 – ಸಮಾಜದಲ್ಲಿ ಜಾತಿ,ಧರ್ಮ,ಭಾಷೆಗಳ ಕನ್ನಡಕ ಕಳಚಿದಾಗ ಭಾವೈಕ್ಯತೆ ಸಾಧ್ಯ ಎಂದು ಸಾಣೆಹಳ್ಳಿ ಶಾಖಾ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ  ಸಲಹೆ ನೀಡಿದರು.

ಬುಧವಾರ ಪಟ್ಟಣದ ಪ್ರೇರಣಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಅಂಗವಾಗಿ  ಚರ್ಚ್ ಆವರಣದಲ್ಲಿ ಆಯೋಜಿಸಲಾಗಿದ್ದ `ಸರ್ವಧರ್ಮ ಸಮನ್ವಯ ಹಾಗೂ ಸಾಂಸ್ಕೃತಿಕ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಂದಿರ, ಮಸೀದಿ, ಚರ್ಚ್‌ಗಳ ಪ್ರಾರ್ಥನೆಯೊಂದಿಗೆ ಕೇವಲ ಮಾನ ಮತ್ತು ಧ್ಯಾನಕ್ಕೆ ಆದ್ಯತೆ ನೀಡದೆ 12 ನೇ ಶತಮಾನದಲ್ಲಿ ಬಸವಣ್ಣನ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸಾರಿದ ಸೂತ್ರಗಳನ್ನು ಪಾಲಿಸಿದರೆ ಮಾತ್ರ ಅಂತರಂಗ ಹಾಗೂ ಬಹಿರಂಗ ಶುದ್ಧಿಗೊಳ್ಳುವುದು. ಬಹಿರಂಗದಿಂದ ಅಂತರಂಗ ಶುದ್ಧಿಗೊಳಿಸುವುದು ಪ್ರತಿಯೊಂದು ಧರ್ಮದ ತಾತ್ಪರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಪ್ಪು ಮರುಕಳಿಸದಂತೆ ಜಾಗೃತರಾಗುವುದೇ ಪ್ರಾಯಶ್ಚಿತ್ತವಾಗಿದೆ. ಆದರೆ ಧರ್ಮದ ಜಗಲಿ ಮೇಲೆ ಕುಳಿತ ಜನರೇ ಪ್ರಾಯಶ್ಚಿತ್ತದ ರೂಪದಲ್ಲಿ ಮೌಢ್ಯತೆ, ಕಂದಾಚಾರಗಳ‌‌ ಕೂಪಕ್ಕೆ ತಳ್ಳುವುದು ಆತಂಕಕಾರಿ ಬೆಳವಣಿಗೆ.  ನಾವು ಗೌರವಿಸಬೇಕಾದದು  ದೇವರುಗಳನ್ನಲ್ಲ. ಜನ್ಮ‌ ನೀಡಿದ ತಂದೆ, ತಾಯಿಗಳನ್ನು ಎಂಬುದನ್ನು ಮರೆಯಬಾರದು.ಲೋಕಕಲ್ಯಾಣಕ್ಕಾಗಿ ಪ್ರಾಣ ತ್ಯಾಗಮಾಡಿದ ಯೇಸುವಿನ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ರೆಕ ಜೇಕಬ್, ಪ್ರೇರಣಾ ಚರ್ಚ್ ನ ಫಾದರ್ ಸಿಲ್ವೆಸ್ಟರ್, ಹಿರಿಯ ನಾಗರೀಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ತಿಪ್ಪೇಸ್ವಾಮಿ, ಶಾಹಿನಾ ಬೇಗಂ,  ಮಂಜುನಾಥ ಗುರೂಜಿ, ಕರವೇ  ಮಹಾಂತೇಶ್, ಪಿ.ಎಸ್. ಅರವಿಂದನ್, ಜಿ.ಎಸ್. ಚಿದಾನಂದ್, ಸಿದ್ದಮ್ಮನಹಳ್ಳಿ ಇಂದಿರಾ, ಮಲ್ಲಿಕಾರ್ಜುನ್, ವಕೀಲ ಕರಿಬಸಯ್ಯ ಉಪಸ್ಥಿತರಿದ್ದರು.

error: Content is protected !!