ಮಲೇಬೆನ್ನೂರು, ಡಿ. 25- ಸುಕ್ಷೇತ್ರ ಕಾಶಿ ಬೇವಿನಹಳ್ಳಿ ಗ್ರಾಮ ದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆಯು ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಗಿನ ಜಾವ 5 ಗಂಟೆಗೆ ಬಾವಿಯಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸುವ ಮುಖಾಂತರ ಶ್ರೀ ಮಹೇಶ್ವರ ಸ್ವಾಮಿಯನ್ನು ಕರೆದು ಕೊಂಡು ಬಂದು ವಿಜೃಂಭಿಸಿದ ನಂತರ ಶ್ರೀ ಮಹೇಶ್ವರ ಸ್ವಾಮಿಗೆ ಅನ್ನ, ಹಾಲು, ಬಾಳೇಹಣ್ಣು, ಬೆಲ್ಲ, ತುಪ್ಪ ನೈವೇದ್ಯ ಮಾಡಿದ ಬಳಿಕ ಸ್ವಾಮಿಗಳು, ಭಕ್ತಾದಿಗಳು ಸೇರಿ ಮಹಾಪಂಕ್ತಿ ನಡೆಸುವುದರೊಂದಿಗೆ ಶ್ರೀ ಮಹೇಶ್ವರ ಸ್ವಾಮಿಯ ಮಹಾ ಪ್ರಸಾದವು ನಡೆಯಿತು.
ಸ್ವಾಮಿಗೆ ಬಂದ ಕಾಣಿಕೆಯನ್ನು ರಾತ್ರಿ ಲೆಕ್ಕ ಮಾಡಿ, ರಾತ್ರಿ 12 ಗಂಟೆಗೆ ಪುನಃ ಶ್ರೀ ಮಹೇಶ್ವರ ಸ್ವಾಮಿಗೆ ಅನ್ನ, ಹಾಲು, ಬಾಳೇಹಣ್ಣು, ಬೆಲ್ಲ, ತುಪ್ಪ ನೈವೇದ್ಯ ಮಾಡಿದ ಬಳಿಕ ಶ್ರೀ ಮಹೇಶ್ವರ ಸ್ವಾಮಿಯನ್ನು ಪುನಃ ಬಾವಿಯಲ್ಲಿ ವಿಜೃಂಭಿಸಿ ಮಹಾಪಂತಿ ನಡೆಸಲಾಯಿತು. ಬುಧವಾರ ಬೆಳಿಗ್ಗೆ ಸ್ವಾಮಿಗೆ ಮನೆಗಳಿಂದ ಎಡೆ ಕೊಡುವುದು, ಹಣ್ಣು, ಕಾಯಿ ಮಾಡಿಸುವುದು, ಸ್ವಾಮಿಗೆ ಬಾಯಿಬೀಗ, ಜವಳ ದಿಂಡು ಉರುಳು ಸೇವೆ ಮಾಡುವುದು ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಿತು.
ನಾಳೆ ದಿನಾಂಕ 27ರ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಭಕ್ತಾದಿಗಳಿಂದ 108 ಕುಂಭಾಭಿಷೇಕ ನೆರವೇರುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.