ದಾವಣಗೆರೆ, ಡಿ. 25 – ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನಗಳಿದ್ದು, ಇವುಗಳಲ್ಲಿ ಅನ್ನ ದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ಈ ದಾನ ನಮಗೆ ಸಂತೃಪ್ತಿ ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ಅಜ್ಜಂಪುರ ಶೆಟ್ರು ಕಾಂಪೌಂಡ್ ಆವರಣದಲ್ಲಿ ಶ್ರೀಮತಿ ಲತಾ ಮತ್ತು ಅಣಬೇರು ಮಂಜಣ್ಣ ಕುಟುಂಬದವರು ಇಂದು ಹಮ್ಮಿಕೊಂಡಿದ್ದ 25ನೇ ವರ್ಷದ ಅಕ್ಕಿ ಸಮರ್ಪಣೆ ಮತ್ತು ಶ್ರೀ ಮಂಜುನಾಥ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಾನದ ಮಹತ್ವ ಕಂಡುಕೊಂಡ ನಾವು ಶ್ರೀಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನಿಡುತ್ತಾ ಬಂದಿದ್ದೇವೆ. ಮನುಷ್ಯನಿಗೆ ಬಟ್ಟೆ, ಚಿನ್ನ ಇಲ್ಲದಿದ್ದರೂ ಬದುಕುತ್ತಾನೆ. ಆದರೆ ಅನ್ನವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದರು. ಇತ್ತೀಚೆಗೆ ಅನ್ನದಾನವು ಎಲ್ಲಾ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ. ತಿರುಪತಿಯಲ್ಲಿ ಅನ್ನಛತ್ರ ಪ್ರಾರಂಭಿಸುವುದಕ್ಕಿಂತ ಮುಂಚೆ ಧರ್ಮಸ್ಥಳಕ್ಕೆ ಆಗಮಿಸಿ ಮಾಹಿತಿ ಕೇಳಿದ್ದರು. ನಂತರ ನಾವು ತಿರುಪತಿಯಲ್ಲಿ ಅನ್ನ ಸಂತರ್ಪಣೆಗಾಗಿ ಪಾತ್ರೆ, ಅಕ್ಕಿ ನೀಡಿದ್ದೆವೆಂದು ಸ್ಮರಿಸಿಕೊಂಡರು.
ಅನ್ನದಾನದಲ್ಲಿ ಪ್ರೀತಿಯ ಪರಿಮಳ ಇರಬೇಕು. ದಾನ ದೊಡ್ಡದಾಗಿರಬೇಕೆಂದೇನಿಲ್ಲ, ನೀವು ಪ್ರೀತಿಯಿಂದ ಮಾಡುವ ಸಣ್ಣ ದಾನವು ಮಹಾದಾನವಾಗಿರುತ್ತದೆ. ದಾಸೋಹ ಎಂದರೆ ಎಲ್ಲರಿಗೂ ಕೊಡುವಂತಹದ್ದು ಎಂದು ಹೆಗಡೆ ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಅನ್ನ ದಾಸೋಹ ಮತ್ತು ಸಾಮಾಜಿಕ ಸೇವೆಗಳು ದೇಶಕ್ಕೆ ಮಾದರಿಯಾಗಿವೆ ಎಂದರು.
ಮಾಯಾಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಓ ಅನಿಲ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹೊನ್ನಾಳಿ ಬಾಬಣ್ಣ, ಕೋಶಾಧಿಕಾರಿ ಎಸ್.ಟಿ. ಕುಸುಮ ಶೆಟ್ರು, ಸದಸ್ಯರಾದ ಸುರೇಶ್ ಹೊಸಕೆರೆ, ಜಿ. ಮಂಜುನಾಥ ಪಟೇಲ್, ಅಣಜಿ ಚಂದ್ರಶೇಖರ್, ಪದ್ಮರಾಜ ಜೈನ್, ರಾಜಶೇಖರ್ ಕೊಂಡಜ್ಜಿ, ಬೆಳ್ಳೂಡಿ ರವಿಶಂಕರ್, ಶುಭ, ಅನಿತಾ, ಜಯಮ್ಮ, ಚೇತನ, ಕೆ.ಜಿ. ಮಹೇಶ್ವರಪ್ಪ, ಕುಮಾರಸ್ವಾಮಿ, ಜಿಗಳಿ ಪ್ರಕಾಶ್, ಹನುಮಂತರಾಯ, ಯೋಜನೇಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ, ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್, ಅಜ್ಜಂಪುರ ಶೆಟ್ರು ಮೃತ್ಯುಂಜಯ ಸೇರಿದಂತೆ ಅನೇಕರು ಭಾಗವಹಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ ಕಾಕನೂರು ಸ್ವಾಗತಿಸಿದರು. ಯೋಜನಾಧಿಕಾರಿ ಶ್ರೀಮತಿ ನಂದಿನಿ ನಿರೂಪಿಸಿ ದರು. ಅಣಬೇರು ಮಂಜಣ್ಣ ವಂದಿಸಿದರು.
ಧರ್ಮಸ್ಥಳಕ್ಕೆ 250 ಕ್ವಿಂಟಾಲ್ ಅಕ್ಕಿ ಚೀಲ ತುಂಬಿದ ಲಾರಿಗೆ ಡಾ. ವಿರೇಂದ್ರ ಹೆಗ್ಗಡೆಯವರು ಪೂಜೆ ಸಲ್ಲಿಸಿದರು.