ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ

ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ

ಹೊನ್ನಾಳಿ ಒಡೆಯರ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ

ಹೊನ್ನಾಳಿ, ಡಿ. 17 – ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂದು ಒಡೆಯರ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ಅಭಿನೇತ್ರಿ ಡ್ಯಾನ್ಸ್ ಅಂಡ್ ಮ್ಯೂಸಿಕ್ ಅಕಾಡೆಮಿ ಹೊನ್ನಾಳಿ ವತಿಯಿಂದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನೇತ್ರಿ ನಾಟ್ಯ ಸಂಧ್ಯಾ ಸಂಭ್ರಮದ 22ನೇ ವರ್ಷದ ವಾರ್ಷಿಕ ಸಮಾರಂಭದ ಸಾನ್ನಿಧ್ಯ ವಹಿಸಿ  ಶ್ರೀಗಳು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಸಂಗೀತ, ನಾಟಕ ಮತ್ತು ನೃತ್ಯಗಳು ಮುದ ನೀಡುತ್ತವೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಸಂಗೀತ ಹಾಗೂ ನಾಟ್ಯಗಳನ್ನು ಮಕ್ಕಳ ಮೂಲಕ ಹೊರ ತರುವ ಕಾರ್ಯವನ್ನು ಅಭಿನೇತ್ರಿ ಡ್ಯಾನ್ಸ್ ಅಂಡ್ ಅಕಾಡೆಮಿ ವತಿಯಿಂದ ಅಕಾಡೆಮಿ ಮುಖ್ಯಸ್ಥೆ ಡಾ. ಪ್ರತಿಮಾ ನಿಜಗುಣಶಿವಯೋಗಿಯವರು ಒಬ್ಬ ನೈಜ ಸಾಧಕಿಯರಾಗಿದ್ದಾರೆ ಎಂದು ಹೇಳಿದರು.

ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮಾತ್ರ ಕಲಾ ಪ್ರಕಾರಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು, ಗಂಡು ಮಕ್ಕಳನ್ನು ದೂರ ಇಡುತ್ತಿದ್ದಾರೆ, ಈ ವಾರ್ಷಿಕ ಸಮಾರಂಭದಲ್ಲಿ ಇದು ವ್ಯಕ್ತವಾಗಿದ್ದು ಇದು ಶುದ್ಧ ತಪ್ಪು ಎಂದ ಅವರು, ಗಂಡು ಮಕ್ಕಳಿಗೂ ನಾಟ್ಯ ಶಾಲೆಗಳಿಗೆ ಸೇರಿಸಿ ಅವರ ಪ್ರತಿಭೆ ಅನಾವರಣಕ್ಕೆ ಸದಾವಕಾಶ ಮಾಡಿಕೊಡಬೇಕು ಎಂದರು.

ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಇಂತಹ ವೇದಿಕೆಗಳು ಸಹಾಯ ಮಾಡುತ್ತವೆ. ಶ್ರೀಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶ್ರೀಮಠಕ್ಕೆ ಕರೆ ತಂದು ಭಾಗವಹಿಸಲು ಸಹಕಾರ ನೀಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಎಚ್.ಎಸ್. ಸುಮಿತ್ರ ರೇಣುಕಾಚಾರ್ಯ, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ಅಕ್ಕ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಪಿ.ಎಂ. ವಿಜಯಾನಂದಸ್ವಾಮಿ, ಪುರಸಭೆ ಸದಸ್ಯ ಡಾ. ಹೊಸಕೇರಿ ಸುರೇಶ್, ಕಸಬಾ ಸೊಸೈಟಿ ಅಧ್ಯಕ್ಷ ಬಿ.ಎಲ್.ಕುಮಾರಸ್ವಾಮಿ ಮಾತನಾಡಿದರು.

ಹರಿಹರ ಲಕ್ಷ್ಮೀಶ ಕಲಾ ಸಂಘದ ಗಮಕ ಶಿಕ್ಷಕಿ ಉಮಾ ಆರ್. ಭಟ್ ಮತ್ತು ಸಂಗಡಿಗರಿಂದ ಸಂಗೀತ ಮತ್ತು ಗಮಕ ಕಾರ್ಯಕ್ರಮ ನಡೆಯಿತು. ಅಭಿನೇತ್ರಿ ಡ್ಯಾನ್ಸ್ ಅಂಡ್ ಅಕಾಡೆಮಿ ಮುಖ್ಯಸ್ಥೆ ಡಾ. ಪ್ರತಿಮಾನಿಜ ಗುಣಶಿವಯೋಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಜಯಪ್ಪ ನಿರೂಪಿಸಿದರು.  

error: Content is protected !!