ತಾರಸಿ ತೋಟ ಮಾಡಿ ತಾಜಾ, ವಿಷಮುಕ್ತ ತರಕಾರಿ ಸೇವಿಸಬೇಕು

ತಾರಸಿ ತೋಟ ಮಾಡಿ ತಾಜಾ, ವಿಷಮುಕ್ತ ತರಕಾರಿ ಸೇವಿಸಬೇಕು

ತಾರಸಿ ತೋಟ ತರಬೇತಿ ಕಾರ್ಯಾಗಾರದಲ್ಲಿ ಡಾ.ಶಾಂತಾ ಭಟ್

ದಾವಣಗೆರೆ, ಡಿ. 17- ಇರುವ ಸೀಮಿತ ಜಾಗದಲ್ಲೇ ಮಹಿಳೆಯರು ತಾರಸಿ ತೋಟ ಮಾಡುವ ಮೂಲಕ ತಾಜಾ ಹಾಗೂ ವಿಷಮುಕ್ತ ಆಹಾರ ಸ್ವಾವಲಂಬನೆ ಸಾಧಿಸಬೇಕಲ್ಲದೇ ಆರೋಗ್ಯವಂತ ಜೀವನ ಹೊಂದಬೇಕೆಂದು ಕಸ-ರಸ ತಜ್ಞರಾದ ಡಾ.ಶಾಂತಾ ಭಟ್ ನಗರ ನಿವಾಸಿಗಳಿಗೆ ಕರೆ ನೀಡಿದರು.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಸ್ವದೇಶಿ ಮೇಳದ 2ನೇ ದಿನದ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ತಾರಸಿ ತೋಟ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಹಜವಾಗಿಯೇ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶದ ಮನೆಗಳಲ್ಲಿ ಜಾಗದ ಲಭ್ಯತೆ ಕಡಿಮೆ ಇರುತ್ತದೆ. ಆದರೂ, ಲಭ್ಯ ಜಾಗವನ್ನೇ ಜಾಣತನದಿಂದ ಬಳಸಿಕೊಂಡಲ್ಲಿ ತರಕಾರಿ, ಸೊಪ್ಪು ಖರೀದಿಗೆ ಮಾರುಕಟ್ಟೆಗೆ ಹೋಗುವ ಫಜೀತಿಯೇ ಇರುವುದಿಲ್ಲ. ಮನೆಯ ತಾರಸಿ, ಕಿಟಕಿ
ಗೋಡೆ, ಬಾಲ್ಕನಿ, ಕಾಂಪೌಂಡ್ ಗೋಡೆ ಹೀಗೆ ಸಾಧ್ಯವಾದ ಕಡೆಗೆಲ್ಲಾ ದೈನಂದಿನ ಅಗತ್ಯದ ಸೊಪ್ಪು, ತರಕಾರಿಯನ್ನು ಬೆಳೆದುಕೊಳ್ಳಬಹುದು. ಜಾಗ ಇಲ್ಲ ಎಂಬುದು ನೆಪ ಮಾತ್ರ. ಸೃಜನಶೀಲತೆಯಿಂದ ಯೋಚಿಸಿದಲ್ಲಿ ತಾಜಾ ತರಕಾರಿಗಳನ್ನು ಮನೆಯಲ್ಲೇ ಬೆಳೆಯಬಹುದು ಎಂದರು.

ಹೊರಗಿನ ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಸೊಪ್ಪು ಬೆಳೆಯಲು ರಾಸಾಯನಿಕ ಬಳಸಲಾಗುತ್ತದೆ. ಅಲ್ಲದೆ, ಅವುಗಳಲ್ಲಿ ಪೌಷ್ಠಿಕಾಂಶ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಜಾಗದ ಅಭಾವವಿರುವ ನಗರ ಪ್ರದೇಶದಲ್ಲಿ ತಾರಸಿ ತೋಟದ ಮೂಲಕ ಹೂವು, ತರಕಾರಿ, ಸೊಪ್ಪು ಬೆಳೆಯಬಹುದು. ಹಸಿ ತ್ಯಾಜ್ಯವನ್ನು ಗೊಬ್ಬರ ಮಾಡಿ, ತಾರಸಿ ತೋಟಕ್ಕೆ ಬಳಸಿಕೊಳ್ಳುವುದರಿಂದ ಕಸ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಇದರಿಂದ ವಿಷಮುಕ್ತ, ತಾಜಾ ತರಕಾರಿ ತೋಟದಿಂದ ನೇರವಾಗಿ, ಅಡುಗೆ ಮನೆಗೆ ಬಂದಂತಾಗುತ್ತದೆ ಎಂದು ಅವರು ತಿಳಿಸಿದರು.

ಮಹಿಳೆಯರು ಬಿಡುವಿನ ವೇಳೆಯಲ್ಲಿ ತಾರಸಿ ತೋಟದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಆಹ್ಲಾದವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಎಲ್ಲೆಡೆ ಕಾಂಕ್ರಿಟೀಕರಣವಾಗುತ್ತಿರುವ ಇಂದಿನ ದಿನಗಳಲ್ಲಿ ಮಣ್ಣು ಎಂದರೆ ಕೊಳಕು ಎಂಬ ಭಾವನೆ ಮೊದಲು ಹೋಗಬೇಕು. ತಾರಸಿ ಭಾರ ತಡೆಯುವುದಿಲ್ಲ ಅನ್ನೋ ಚಿಂತೆ ಬೇಡ. ನೀರು ಸರಾಗವಾಗಿ ಹರಿದುಹೋಗುವಂತೆ ಇಳಿಜಾರು ಮಾಡಿದಲ್ಲಿ ತಾರಸಿ ತೋಟದಿಂದ ಮನೆಯ ಕಟ್ಟಡಕ್ಕೇನೂ ಧಕ್ಕೆಯಾಗದು ಎಂದು ಅವರು ವಿವರಿಸಿದರು.

ಗಿಡ ಬೆಳೆಯಲು ಭಾರವಾದ ಸಿಮೆಂಟ್ ಪಾಟ್ ಬಳಸಬಾರದು, ಹಗುರವಾದ ಪ್ಲಾಸ್ಟಿಕ್ ಪಾಟ್, ಗೋ ಬ್ಯಾಗ್, ಹಳೆಯ ಪೇಂಟ್, ಡಬ್ಬಿ, ಪ್ಲಾಸ್ಟಿಕ್ ಬಕೆಟ್ ಹೀಗೆ ನಾನಾ ಸಾಮಗ್ರಿಗಳನ್ನು ಬಳಸಿಕೊಂಡು ತಾರಸಿ ತೋಟ ಮಾಡಬಹುದು, ಪಾಟ್ ಇಡಲು ಸ್ಟ್ಯಾಂಡ್ ಅಥವಾ ಅಂಚು ಕಲ್ಲುಗಳನ್ನು ಬಳಸಬೇಕು. ಬೇಕಿದ್ದಲ್ಲಿ ತಾರಸಿಗೆ ವಾಟರ್ ಪ್ರೂಫ್ ಪೇಂಟ್ ಮಾಡಬಹುದು. ಏನೇ ಮಾಡಬೇಕಿದ್ದರೂ ಕ್ರಿಯಾಶೀಲತೆ, ಆಸಕ್ತಿ ಅಗತ್ಯವೇ ಹೊರತು ಸಂಪನ್ಮೂಲಗಳು ಅಲ್ಲ ಎಂದು ಅವರು ಕಿವಿಮಾತು ಹೇಳಿದರು.

ಸ್ವದೇಶಿ ಮೇಳದ ಸಂಚಾಲಕರಾದ ಮಂಜುಳಾ ಮಹೇಶ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ, ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ಮತ್ತಿತರರು ಕಾರ್ಯಾಗಾರದಲ್ಲಿ ಹಾಜರಿದ್ದರು.

error: Content is protected !!