`ಮಕ್ಕಳ ಹಕ್ಕುಗಳು, ಆರೋಗ್ಯ ಹಾಗೂ ರಕ್ಷಣೆ’ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿಮತ
ದಾವಣಗೆರೆ, ಡಿ.17- ಪ್ರಸಕ್ತ ದಿನಮಾನಗಳಲ್ಲಿ ಮಾಧ್ಯಮಗಳು ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ಯುನಿಸೆಫ್, ಮೈಸೂರು ವಿಶ್ವವಿದ್ಯಾ ನಿಲಯ ಮತ್ತು ದಾವಣಗೆರೆ ವಿಶ್ವವಿದ್ಯಾನಿಲ ಯದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ದಾವಣಗೆರೆ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ `ಮಕ್ಕಳ ಹಕ್ಕುಗಳು, ಆರೋಗ್ಯ ಹಾಗೂ ರಕ್ಷಣೆ’ ಕುರಿತಾದ 2 ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಮಾಧ್ಯಮಗಳು ಅವರ ಮೇಲಾಗುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಯುನಿ ಸೆಫ್ ಜವಾಬ್ದಾರಿ ಅಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಿದೆ. ಹಾಗಾಗಿ ಮಕ್ಕಳ ಮೇಲಿನ ಶೋಷಣೆಗಳು ಹಾಗೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ನಾವು ರಕ್ಷಿಸಬೇಕು ಎಂದರು.
ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಪ್ರಕರಣ ಗಳು ಹೆಚ್ಚಾಗುತ್ತಿವೆ. ಹಿಂದೆಲ್ಲಾ ಮಕ್ಕಳಿಗಾಗಿ ಪತ್ರಿಕೆಗಳಲ್ಲಿ ವಿಶೇಷ ಪುಟಗಳು ಬರುತ್ತಿದ್ದವು, ಆದರೆ ಈಗ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಸುದ್ದಿಗಳೇ ಹೆಚ್ಚಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಿಂಗ ಸಮಾನತೆ ಕಾಯ್ದುಕೊಳ್ಳಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆದಿದೆ. ಆದರೆ ನಮ್ಮ ದೇಶದಲ್ಲಿ ಗಂಡು ಸಂತಾನದ ವ್ಯಾಮೋಹದಿಂದ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿ ನಡೆಯುತ್ತಿವೆ. ಇದರಿಂದಾಗಿ ರೈತಾಪಿ ವರ್ಗದ ವರಿಗೆ ಹೆಣ್ಣು ಸಿಗದ ಪರಿಸ್ಥಿತಿ ಉದ್ಬವಿಸಿದೆ ಎಂದರು.
ಭ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಲಿಂಗ ತಾರತಮ್ಯವನ್ನು ತೊಲಗಿಸಲು ಮಾಧ್ಯಮಗಳು ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಮೈಸೂರು ವಿವಿಯ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷೆ ಸ್ವಪ್ನಾ ನಾಯ್ಕ್ ಮಾತನಾಡಿ, ಕೊರೋನ ನಂತರದ ದಿನಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ ಎಂಬುದು ಯುನೆಸ್ಕೋ ವಾದವಾಗಿದೆ.
ಮಕ್ಕಳೊಂದಿಗೆ ಒಡನಾಟ ಕಡಿಮೆ ಆಗಿರುವುದರಿಂದ ಅವರಲ್ಲಿ ಮಾನಸಿಕ ಖಿನ್ನತೆ ಆರಂಭವಾಗುತ್ತಿದೆ. ಹಾಗಾಗಿ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದರು.
ಯುನಿಸೆಫ್ ಹೈದರಾಬಾದ್‌ನ ಪ್ರೊಸುನ್‌ಸೇನ್ ಮಾತನಾಡಿ, ಮಕ್ಕಳ ಮೇಲೆ ಹೇರುವ ಒತ್ತಡಗಳಿಂದ ಅವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಪಾಲಕರು ಅವರಿಗೆ ಒತ್ತಡ ಹೇರದೆ, ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಈ ವೇಳೆ ದಾವಣಗೆರೆ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಪ್ರೊ. ಶಿವಕುಮಾರ ಕಣಸೋಗಿ, ಮಂಜುನಾಥ ಸುಬೇದಾರ್ ಮತ್ತಿತರರಿದ್ದರು.