ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು, ಡಿ. 15 – ನಗರದ ಬಡ ಜನತೆಗೆ ನಗರ ಸಾರಿಗೆ ಅವಶ್ಯವಿದೆ. ಜೊತೆಗೆ ಆಟೋ ಓಡಿಸುವ ಬಡವರ ಹಿತ ಕಾಪಾಡುವುದೂ ಸಹ ಅವಶ್ಯವಿದೆ. ಹಾಗಾಗಿ ಅಧಿಕಾರಿಗಳು ಸೇರಿದಂತೆ ಎಲ್ಲರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಗರ ಸಾರಿಗೆ ಪ್ರಾರಂಭಿಸುವ ಆಶಯ ನನ್ನದಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಂದು ನಗರಕ್ಕೆ ತರಲಾದ ರಾಜ್ಯ ಸಾರಿಗೆಯ ಎರಡು ಹೊಸ ಬಸ್ಗಳಿಗೆ ಪೂಜೆ ಸಲ್ಲಿಸಿ ಚಾಲನೆಗೆ ಹಸಿರು ನಿಶಾನೆ ತೋರಿಸಿ, ಪತ್ರಿಕೆಯವರ ಜೊತೆ ಮಾತನಾಡಿದರು.
ದಾವಣಗೆರೆ ಜನ ಸಂಖ್ಯೆ 8 ಲಕ್ಷದಷ್ಟಿದೆ, ಅಲ್ಲಿ ನಗರ ಸಾರಿಗೆ ಜೊತೆಗೆ ಆಟೋದವರಿಗೂ ಆದಾಯ ಸಿಗಲಿದೆ. ಆದರೆ ರಾಣೇಬೆನ್ನೂರು ನಗರದ ಜನ ಸಂಖ್ಯೆಯು 2 ಲಕ್ಷಕ್ಕೂ ಕಡಿಮೆ ಇದೆ. ಹೀಗಾಗಿ ಆಟೋದವರ ಹಿತ ರಕ್ಷಣೆ ಅವಶ್ಯವಿದೆ. ಎಲ್ಲರೊಡನೆ ಚರ್ಚಿಸಿ ನಗರ ಸಾರಿಗೆಗೆ ಆದ್ಯತೆ ಕೊಡುವದಾಗಿ ಶಾಸಕ ಪ್ರಕಾಶ ಕೋಳಿವಾಡ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರಸಭೆ ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ಗುರುರಾಜ ಕಂಬಳಿ, ಸಾರಿಗೆ ಮ್ಯಾನೇಜರ್ ಪ್ರಶಾಂತ ಸಂಗ್ರೇಶಿ, ಕಂಟ್ರೋಲರ್ ಉಮೇಶ ನಾಯಕ, ಇರ್ಪಾನ್ ದಿಡಗೂರ, ಮತ್ತಿತರರಿದ್ದರು.