ತಾ.ಪಂ. ಪ್ರಗತಿ ಪರಿಶೀಲನಾ ಸಭೆ
ಜಗಳೂರು, ಡಿ. 13 – ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿಯ 29 ಮಳಿಗೆಗಳಿದ್ದು ತೆರಿಗೆ ಕಟ್ಟದೇ ಮೂರು ಬಾರಿ ನೋಟಿಸ್ ನೀಡಿದರೂ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ತಕ್ಷಣವೇ ಪೊಲೀಸ್ ಮತ್ತು ತಹಶೀಲ್ದಾರ್ ಅವರ ನೆರವು ಪಡೆದು ಮಳಿಗೆ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿಸಿ. ಸ್ಥಳದಲ್ಲೇ ತೆರಿಗೆ ಕಟ್ಟಿದವರನ್ನು ಬಿಟ್ಟು ಉಳಿದವರನ್ನು ಖಾಲಿ ಮಾಡಿಸಿ. ವಸೂಲಿ ಆದ ಹಣದಿಂದ ಪೌರ ಕಾರ್ಮಿಕರಿಗೆ ವೇತನ ಪಾವತಿಸಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ತಾಪಂ ಇಒ ಕೆಂಚಪ್ಪ, ಜಿಪಂ ಎಇಇ ಶಿವಮೂರ್ತಿಯವರಿಗೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ದಾವಣಗೆರೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಶಾಲೆಗಳು, ಹಾಸ್ಟೆಲ್‌ಗಳು, ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾಂಪೌಂಡುಗಳಿರುವ ಶಾಲೆಗಳಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ತರಕಾರಿ ಬೀಜಗಳನ್ನು ನೀಡಬೇಕು. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಹೆಚ್ಚಿನ ವಿಶೇಷ ತರಗತಿ ಮಾಡಿ ಹೆಚ್ಚಿನ ಅಂಕಗಳನ್ನು ಪಡೆಯುವಂತೆ ಪ್ರೇರೇಪಿಸಬೇಕು. ಮಾರ್ಚ್ 31 ರೊಳಗೆ ನಿಯಮಗಳಿಗೆ ಒಳ ಪಟ್ಟು ಇಲಾಖೆಗಳ ಹಣವನ್ನು ಖರ್ಚು ಮಾಡಬೇಕು. ಕೆರೆಗಳು ತುಂಬಿದ್ದು, ಜಾನುವಾರುಗಳಿಗೆ ತೊಂದರೆಯಾಗದಂತೆ ಶುದ್ದ ಮೇವಿನ ಬೀಜಗಳನ್ನು ರೈತರಿಗೆ ನೀಡುವುದು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸಬೇಕು.ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಲಿಖಿತವಾಗಿ ಕರ ಪತ್ರಗಳು, ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕೆಂದು ತಾಲ್ಲೂಕಿನ ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್ : ಸಭೆಗೆ ಗೈರಾದ ಸಹಕಾರ, ಸಣ್ಣ ನೀರಾವರಿ, ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು, ಗೈರಿನ ಬಗ್ಗೆ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಅವರ ಗಮನಕ್ಕೆ ತರುವಂತೆ ಇಒಗೆ ಆಡಳಿತಾಧಿಕಾರಿ ಕೊಟ್ರೇಶ್ ಸೂಚನೆ ನೀಡಿದರು.
ಕೃಷಿ ಇಲಾಖೆ ಎಡಿಎ ಎಚ್. ಶ್ವೇತಾ ಸಭೆಗೆ ತಮ್ಮ ಇಲಾಖೆಯ ವರದಿ ಮಂಡಿಸಿ, ಮುಂಗಾರು ಮತ್ತು ಹಿಂಗಾರು ಬಿತ್ತನೆ ಬೀಜಗಳ ಪೂರೈಕೆ ಬಗ್ಗೆ ಮಾಹಿತಿ ನೀಡಿ, ಈ ಬಾರಿ ಹಿಂಗಾರಿನಲ್ಲಿ ಅತಿ ಹೆಚ್ಚು ರಾಗಿ ಬಿತ್ತನೆಯಾಗಿದೆ.ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಎಸ್‍ಎಡಿಎಚ್ ಪ್ರಭು ಶಂಕರ್, ಮಳೆ ಜಾಸ್ತಿಯಾಗಿ ಈರುಳ್ಳಿ 40 ಹೆ. ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. 111 ಈರುಳ್ಳಿ ಶೇಕರಣಾ ಘಟಕಗಳು ಮಂಜೂರಾಗಿರುವ ಬಗ್ಗೆ ಮತ್ತು ತರಕಾರಿ ಬೀಜಗಳನ್ನು ಉಚಿತವಾಗಿ ಕೊಡುವ ಉದ್ದೇಶವಿದ್ದು ಇನ್ನೂ ದ್ವಿದಳ ಧಾನ್ಯಗಳ ಬಿತ್ತನೆ ಬೀಜ ಪೂರೈಕೆಯಾಗಿಲ್ಲ ಎಂದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಎಇಇ ಸಾದಿಕ್‍ವುಲ್ಲಾ ಮಾತನಾಡಿ ತಾಲ್ಲೂಕಿನ 166 ಹಳ್ಳಿಗಳಲ್ಲಿ ಜೆಜೆಎಂ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಕೆಲ ಕಡೆ ಪೂರ್ಣಗೊಂಡಿವೆ. ಇನ್ನು ಕೆಲವು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಮೂರ್ತಿ, ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜು, ಆರೋಗ್ಯ ಇಲಾಖೆಯ ಟಿಎಚ್‍ಒ ಡಾ. ವಿಶ್ವನಾಥ್, ಸಿಡಿಪಿಒ ಬೀರೇಂದ್ರಕುಮಾರ್, ಶಿಕ್ಷಣ ಇಲಾಖೆ ಬಿಇಒ ಹಾಲಮೂರ್ತಿ, ಬೆಸ್ಕಾಂ ಎಇಇ ಸುಧಾಮಣಿ, ಸಮಾಜ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ, ಎಸ್‍ಟಿ ಅಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ವಲಯ ಅರಣ್ಯಾಇಲಾಖಾಧಿಕಾರಿ ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವರದಿ ಮಂಡಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಕೆಂಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.