ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮನವಿ
ಜಗಳೂರು, ಡಿ. 12 – ಬರುವ ಜನವರಿ 11, 12, 13ರಂದು ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೈಜೋಡಿಸಿ, ಸಹಕರಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎ.ಬಿ.ರಾಮಚಂದ್ರಪ್ಪ ಅವರಿಗೆ ಸನ್ಮಾನಿಸಿ, ಅವರು ಮಾತನಾಡಿದರು.
`ಜಾತ್ಯತೀತ, ಪಕ್ಷಾತೀತವಾಗಿ ಕನ್ನಡಾಂಬೆಯ ಸೇವೆಗೆ ಸನ್ನದ್ದರಾಗಿ, ಭುವನೇಶ್ವರಿಯ ಕೃಪೆಗೆ ಪಾತ್ರರಾಗಬೇಕು. ತಾಲ್ಲೂಕಿನ ಸಾಹಿತಿಗಳು, ಕನ್ನಡ ಮನಸ್ಸುಗಳು ಪ್ರತಿಯೊಬ್ಬರೂ ಕೈಜೋಡಿಸಿ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಎಳೆಯೋಣ ಎಂದರು.
ಖ್ಯಾತ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರ ನಿರ್ದೇಶನದಲ್ಲಿ ಜಗಳೂರು ತಾಲ್ಲೂಕಿನ ಪ್ರಾಕೃತಿಕ ಸೊಬಗು, ಇತಿಹಾಸ, ಪರಂಪರೆಯನ್ನು ಸಾರುವ ಸಾಕ್ಷ್ಯ ಚಿತ್ರ ಪ್ರದರ್ಶನ ಅನಾವರಣಗೊಳಿಸ ಲಾಗುವುದು ಎಂದು ತಿಳಿಸಿದರು.
ಜಲೋತ್ಸವ ಕಾರ್ಯಕ್ರಮ : ಜಿಲ್ಲಾ ಸಾಹಿತ್ಯ ಸಮ್ಮೇಳನದ ನಂತರ ಜ.13 ರಂದು 50 ವರ್ಷಗಳ ನಂತರ ಕೆರೆಗಳ ಕೋಡಿ ಬಿದ್ದು ಜಲಸಂಭ್ರಮದ ಸವಿನೆನಪಿಗಾಗಿ ಜಲೋತ್ಸವ ಕಾರ್ಯಕ್ರಮವನ್ನು ವೈಭವ, ಸಂಭ್ರಮದಿಂದ ಆಚರಿಸೋಣ ಎಂದು ಶಾಸಕರು ತಿಳಿಸಿದರು.
ಲೋಗೋ ಬಿಡುಗಡೆ : ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಸೇರಿದಂತೆ, ಕಸಾಪ ಪದಾಧಿಕಾರಿ ಗಳು 14 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ `ಲೋಗೋ’ ಅನಾವರಣಗೊಳಿಸಿದರು.
`ಬರದ ನಾಡಿನಲ್ಲಿ ಮೂರು ದಶಕಗಳ ನಂತರ ಸಾಂಸ್ಕೃತಿಕ ಮೌಲ್ಯಗಳನ್ನು ಸಾರುವ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಗೊಳಿಸಿದ ಕನ್ನಡ ಮನಸ್ಸುಗಳಿಗೆ ಚಿರ ಋಣಿ, ಶಾಸಕ ಬಿ.ದೇವೇಂದ್ರಪ್ಪ ಅವರ ಸಹಕಾರದಿಂದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ. ಸಾಂಸ್ಕೃತಿಕ ಪರಂಪರೆ ಹೊಂದಿದ ನಾಡಿನಲ್ಲಿ ವೈಚಾರಿಕ ಪ್ರಜ್ಞೆಯನ್ನು ಅರಿಯಲು ಬುಡಕಟ್ಟು ಸಂಸ್ಕೃತಿ ವಿಷಯದ ಗೋಷ್ಠಿಯನ್ನು ನಡೆಸಲಾಗುವುದು. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ವೈಭವಕ್ಕೆ ಸಮ್ಮೇಳನ ಪೂರಕವಾಗಲಿ’.
ಎ.ಬಿ.ರಾಮಚಂದ್ರಪ್ಪ,
14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು.
ಲೋಗೋದಲ್ಲಿ ತಾಲ್ಲೂಕಿನ ಐತಿಹಾಸಿಕ ಕಲ್ಲದೇವರಪುರ ಕಲ್ಲೇಶ್ವರ, ಸಂಗೇನಹಳ್ಳಿ ಕೆರೆ, ಕೊಣಚಗಲ್ ಗುಡ್ಡದ ಪುಷ್ಕರಣಿ, ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನ, ಕೊಂಡಕುರಿ ಪ್ರಾಣಿ ಚಿತ್ರಗಳು ಅಡಕವಾಗಿವೆ.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, ಜ. 11, 12ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮೂರು ಗೋಷ್ಠಿಗಳು, ಎರಡು ವಿಶೇಷ ಉಪನ್ಯಾಸಗಳು, 1 ಕವಿಗೋಷ್ಠಿ ನಡೆಯಲಿವೆ.
ಉದ್ಘಾಟನೆಯನ್ನು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನೆರವೇರಿಸಲಿದ್ದಾರೆ. ಸಮಾರೋಪಕ್ಕೆ ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಗಮಿಸುವ ನಿರೀಕ್ಷೆಯಿದೆ. ಹಾಸ್ಯ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಅದ್ದೂರಿ ಯಾದ ಮೆರವಣಿಗೆ ಆಯೋಜಿಸಲಾಗು ವುದು. ಸಮ್ಮೇಳನದ ಪೂರ್ವದಲ್ಲಿ ಭುವನೇಶ್ವರಿ ಕನ್ನಡ ರಥದ ಮೆರವಣಿಗೆ 9 ದಿನಗಳ ಕಾಲ ತಾಲ್ಲೂಕಿನಾದ್ಯಂತ ಸಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ವಾಮದೇವಪ್ಪ, ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಸಾಹಿತಿಗಳಾದ ಎನ್.ಟಿ.ಎರಿಸ್ವಾಮಿ, ಡಿಸಿ ಮಲ್ಲಿಕಾರ್ಜುನ್, ಪ್ರಾಂಶುಪಾಲ ನಾಗಲಿಂಗಪ್ಪ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಬಸವರಾಜ್, ವಕೀಲರಾದ ಡಿ. ಶ್ರೀನಿವಾಸ್, ಆರ್.ಓಬಳೇಶ್, ಮಾರಪ್ಪ, ಗೀತಾ ಮಂಜು, ಬಿ.ಮಹೇಶ್ವರಪ್ಪ, ಓಬಣ್ಣ , ಬಡಪ್ಪ, ಶಿವಣ್ಣ, ಗೌರಮ್ಮ ಇದ್ದರು.