ಜಗಳೂರಿನಲ್ಲಿ ಕಮ್ಯುನಿಸ್ಟ್ ಪ್ರತಿಭಟನೆ

ಜಗಳೂರಿನಲ್ಲಿ ಕಮ್ಯುನಿಸ್ಟ್ ಪ್ರತಿಭಟನೆ

ಜಗಳೂರು, ಡಿ. 11  –   ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ  ಇಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಾಗೂ ಕೋಮುವಾದ, ಹಿಂಸಾಚಾರ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ತಹಶೀಲ್ದಾರ್  ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್ ಭಾಷ ಮಾತನಾಡಿ,’ಅದಾನಿ ಮೇಲಿನ ಲಂಚ ಪ್ರಕರಣದ ಕುರಿತು ಜೆಪಿಸಿ ಮೂಲಕ ಸಮಗ್ರ ತನಿಖೆ ನಡೆಸಬೇಕು. ಮಣಿಪುರದ ಮೈತೇಯಿ ಮತ್ತು ಕುಕ್ಕಿ ಸಮುದಾಯಗಳ ನಡುವೆ ನಡೆಯುವ ಜನಾಂಗೀಯ ಸಂಘರ್ಷ ನಿಲ್ಲಿಸಿ, ಶಾಂತಿ 

ಸುವ್ಯವಸ್ಥೆ ಕಾಪಾಡಬೇಕು. ಧರ್ಮಗಳ ಮಧ್ಯೆ  ಕೋಮುಭಾವನೆ ಕೆರಳಿಸುವ ಕೃತ್ಯಗಳು ನಡೆಯದಂತೆ ಸಾಮರಸ್ಯತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ,’ದೇಶದಲ್ಲಿ ಸಂವಿಧಾನ ಬಹುತ್ವದ ಆಶಯದ ವಿರುದ್ದವಾಗಿ ಏಕತ್ವದ ಪ್ರತಿಪಾದನೆ ಮುಂದುವರೆಸಿರುವ ಮೋದಿ ಆಡಳಿತ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿರುವ ಒಂದು ದೇಶ ಒಂದು ಚುನಾವಣೆ ಎಂಬ ವಿಷಯವನ್ನು ಮುನ್ನೆಲೆಗೆ ತರುತ್ತಿರುವುದು ಜನ ವಿರೋಧಿಯಾಗಿದೆ. ಸಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಅಜ್ಜಪ್ಪ, ಕರಿಯಪ್ಪ, ಚನ್ನಮ್ಮ, ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!