ರಾಣೇಬೆನ್ನೂರು, ಡಿ. 9- ದಕ್ಷಿಣ ಕರ್ನಾಟಕದಲ್ಲಿ 12 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ, ಉತ್ತರ ಕರ್ನಾಟಕದಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬರು. ಕಲ್ಯಾಣ ಕರ್ನಾಟಕದಲ್ಲಿ 50 ರಿಂದ 60 ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕರು ಈ ರೀತಿಯ ಧೋರಣೆ ಸರಿಯಾದುದಲ್ಲ. ಈ ಬಗ್ಗೆ ನಾವು ನ್ಯಾಯ ದೊರಕಿಸಿಕೊಳ್ಳುವ ಪ್ರಯತ್ನ ನಡೆಸಬೇಕಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾ.ಪಂ.ನಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಯ ಜೊತೆ ಚರ್ಚಿಸುತ್ತಾ ಮೇಲಿನಂತೆ ಅಭಿಪ್ರಾಯಿಸಿದರು.
ಹಾಜರಾತಿಗಿಂತ ಹೆಚ್ಚು ಮೊಟ್ಟೆ ಇನ್ನಿತರ ಆಹಾರ ಪದಾರ್ಥಗಳನ್ನು ಪಡೆಯುತ್ತಿರುವುದು ಎಲ್ಲ ಶಾಲೆಗಳಲ್ಲಿ ನಡೆಯುತ್ತಿದೆ ಎನ್ನುವ ಸದಸ್ಯರ ದೂರು ಪ್ರಸ್ತಾಪಿಸಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಅಕ್ಷರದಾಸೋಹ ಇಲಾಖೆ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ತಾಲ್ಲೂಕಿನಲ್ಲಿನ ಅಂಬೇಡ್ಕರ್, ವಾಲ್ಮೀಕಿ ಮುಂತಾದ ಮಹನೀಯರ ಹೆಸರಿನ ಸಮುದಾಯ ಭವನಗಳ ಸ್ಥಿತಿ-ಗತಿಯ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸಿ ವರದಿ ಕೊಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಶಾಸಕರು ಕಟ್ಟಪ್ಪಣೆ ಮಾಡಿದರು. ಆರೋಗ್ಯ ಇಲಾಖೆಯ ಬಗ್ಗೆ ಬಂದ ದೂರುಗಳ ಬಗ್ಗೆ ಸೂಕ್ತ ಕ್ರಮಕ್ಕೆ ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ಮೊದಲಿನಿಂದಲೂ ಸಂಪರ್ಕದಲ್ಲಿರುವವರಿಗೆ ಮಾತ್ರ ಸರ್ಕಾರದ ಯೋಜನೆಗಳ ಉಪಯುಕ್ತತೆ ಹಾಗೂ ಸಲಕರಣೆಗಳು ದೊರೆಯುತ್ತಿರುವ ದೂರುಗಳ ಬಗ್ಗೆ ಪ್ರಸ್ತಾಪಿಸಿ ಕೃಷಿ ಇಲಾಖೆಯ ಅಧಿಕಾರಿ ಶಾಂತಮಣಿ ಅವರಿಗೆ ಸಮಜಾಯಿಷಿ ಕೇಳಿದ ಶಾಸಕರು, ಎಲ್ಲ ಯೋಜನೆಗಳು ರೈತರಿಗೆ ದೊರಕಬೇಕು. ಆ ದಿಶೆಯಲ್ಲಿ ಕ್ರಮ ಜರುಗಿಸುವಂತೆ ಅವರು ಖಡಕ್ ಸೂಚನೆ ನೀಡಿದರು.
ಪ್ರಾರಂಭದಲ್ಲಿ ನಾಡಗೀತೆಗೆ ಆದ ಅಡತಡೆ ಬಗ್ಗೆ ಪ್ರಸ್ತಾಪಿಸಿ ಮುಂದೆ ಇಂಥಹ ಕೃತ್ಯ ನಡೆಯದಂತೆ ಅಧಿಕಾರಿ ಗಳಿಗೆ ಎಚ್ಚರಿಕೆ ವಹಿಸುವಂತೆ ಶಾಸಕರು ಸೂಚಿಸಿದರು. ವೇದಿಕೆಯಲ್ಲಿ ಗ್ಯಾರಂಟಿಗಳ ಅಧ್ಯಕ್ಷ ಮಂಜನಗೌಡ ಪಾಟೀಲ, ತಾಪಂ ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ತಹಶೀಲ್ದಾರ್ ಹಾಗೂ ಪೌರಾಯುಕ್ತರು ಉಪಸ್ಥಿತರಿದ್ದರು.