ಜಗಳೂರು ಪ.ಪಂ. ಸಭೆ
ಜಗಳೂರು, ಡಿ. 9 – ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಟ್ಟಣ ಪಂಚಾಯಿತಿಯಲ್ಲಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆ ಸದಸ್ಯರ ವಾಗ್ವಾದ, ಗೊಂದಲದಿಂದ ಮುಂದೂಡಲಾಯಿತು.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 8 ಕೋಟಿ ಅನುದಾನವನ್ನು ಪಟ್ಟಣದ ಅಭಿವೃದ್ದಿಗೆ ಶಾಸಕರು ಮೀಸಲಿಟ್ಟಿದ್ದು, 18 ವಾರ್ಡ್ ಗಳಿಗೆ ಪ್ರಾತಿನಿಧ್ಯ ನೀಡದೆ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಪ.ಪಂ.ಅಧ್ಯಕ್ಷ ನವೀನ್ ಕುಮಾರ್ ಸಭೆಯನ್ನು ಮುಂದೂಡಿದರು.
ಸದಸ್ಯ ಆರ್.ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಚರಂಡಿ ಮತ್ತು ರಸ್ತೆಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ಪಟ್ಟಣದ ಮೂಲಸೌಕರ್ಯ ಅಭಿವೃದ್ದಿಗಾಗಿ 8 ಕೋಟಿ ಅನುದಾನ ನೀಡಿರುವುದು ಆದರೆ ಕೆಲವಾರ್ಡ್‌ಗಳಿಗೆ ಮಾತ್ರ ಅನುದಾನ ನೀಡಿದ್ದು, ಕೆಲ ವಾರ್ಡ್‌ಗಳಿಗೆ ಅನುದಾನ ನೀಡದೇ ಇರುವುದನ್ನು ಪ್ರಶ್ನಿಸಿ ಮೂಲ ಸೌಕರ್ಯಕ್ಕೆ ತಲಾ 30 ಲಕ್ಷದವರೆಗೆ ಕನಿಷ್ಠ ಅನು ದಾನ ಹಂಚಿಕೆಯಾಗಲಿ ಎಂದು ಒತ್ತಾಯಿಸಿದರು.
ಪ.ಪಂ.ಉಪಾಧ್ಯಕ್ಷೆ ಲೋಕಮ್ಮ ಮಾತನಾಡಿ, ಕೆಲ ವಾರ್ಡ್‌ಗಳ ಅಭಿವೃದ್ದಿಗೆ ಮಾತ್ರ ಅನುದಾನ ನೀಡಲಾಗಿದ್ದು, ಕ್ರಿಯಾ ಯೋಜನೆ ಮಾಡುವುದು ಸರಿಯಲ್ಲ. ಶಾಸಕರ ಬಳಿ ನಿಯೋಗ ತೆರಳಿ ಚರ್ಚಿಸಿ ಪ್ರತಿ ವಾರ್ಡ್‌ಗಳ ಅಭಿವೃದ್ದಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪ.ಪಂ. ಸದಸ್ಯರಾದ ಶಕೀಲ್ ಅಹಮ್ಮದ್, ಲಲಿತಮ್ಮ, ದೇವರಾಜ್ ಮಾತನಾಡಿದರು. ಶಾಸಕರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆ ನೀಡಿದ್ದು, ಇದೀಗ ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಮನವಿ ಮಾಡಿದರು.
ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸದಸ್ಯರಾದ ಮಹಮ್ಮದ್ ಅಲಿ, ನಿರ್ಮಲಕುಮಾರಿ, ಲಲಿತಮ್ಮ, ಪಾಪಲಿಂಗಪ್ಪ, ರೇವಣ್ಣ, ದೇವರಾಜ್, ಸರೋಜಮ್ಮ ಇದ್ದರು.