ದಾವಣಗೆರೆ, ಡಿ.8- ತಾಲ್ಲೂಕಿನ ಹೆಮ್ಮನ ಬೇತೂರು ಕ್ರಾಸ್‌ನಿಂದ ದಾವಣಗೆರೆ ನಗರ ಪ್ರವೇಶಿಸುವ ರಸ್ತೆಯವರೆಗೆ ಕೈಗೊಂಡಿರುವ ತಾತ್ಕಾಲಿಕ ಡಾಂಬರ್ ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆಯಲ್ಲಿನ ಗುಂಡಿಗಳಿಗೆ ಸರಿಯಾದ ಪ್ರಮಾಣದಲ್ಲಿ ಡಾಂಬರ್ ಹಾಕದೇ ಇರುವುದನ್ನು ಕಂಡ ಶಾಸಕರು ಕಳಪೆ ದುರಸ್ತಿ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರ ಮತ್ತು ಇಂಜಿನಿಯರ್ ಎಲ್ಲಿಗೆ ಹೋಗಿದ್ದಾರೆ ? ಎಂದು ಕೆಲಸಗಾರರಿಗೆ ಪ್ರಶ್ನಿಸಿದ ಅವರು, ಮನಬಂದಂತೆ ಡಾಂಬರ್ ಹಾಕಿದರೆ ಎರಡ್ಮೂರು ವಾಹನ ಓಡಾಡಿದರೆ ಸಾಕು, ಗುಂಡಿಗಳು ಪುನರ್ ನಿರ್ಮಾಣವಾಗಲಿವೆ ಎಂದು ಕಿಡಿಕಾರಿದರು.
ಸ್ಥಳದಲ್ಲಿ ಗುತ್ತಿಗೆದಾರ ಹಾಗೂ ಸಂಬಂಧ ಪಟ್ಟ ಇಂಜಿನಿಯರ್ ಇಬ್ಬರೂ ಇರಲಿಲ್ಲ. ಹಾಗಾಗಿ ಕೆಲಸಗಾರರು ರಸ್ತೆ ಗುಂಡಿಗಳಿಗೆ ತಮಗೆ ತಿಳಿದಷ್ಟು ಡಾಂಬರು ಸವರುತ್ತಿದ್ದರು. ಇದನ್ನು ಮನಗಂಡ ಶಾಸಕರು ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರು.
ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು. ಹಾಗಾಗಿ ನಿಗದಿ ಪಡಿಸಿದ ಪ್ರಮಾಣದಲ್ಲಿ ರಸ್ತೆ ಗುಂಡಿಗೆ ಡಾಂಬರ್ ತುಂಬಬೇಕು. ಈ ನಿಟ್ಟಿನಲ್ಲಿ ಗುಣಮಟ್ಟದ ರಸ್ತೆ ದುರಸ್ತಿ ಮಾಡಬೇಕು ಎಂದು ತಾಕೀತು ಮಾಡಿದರು.
`ಸ್ಥಳದಲ್ಲೇ ಇದ್ದು ದುರಸ್ತಿ ಕಾಮಗಾರಿ ಮಾಡಬೇಕು. ಗುತ್ತಿಗೆದಾರರಿಗೆ ಹೇಳಿ ನೀವು ಸ್ಥಳಕ್ಕೆ ಬರದಿದ್ದರೆ ಅವರು ಕಳಪೆ ದುರಸ್ತಿ ಮಾಡುತ್ತಾರೆ, ಪದೇ ಪದೇ ರಸ್ತೆ ದುರಸ್ತಿಗೆ ಎಲ್ಲಿಂದ ಹಣ ತರಬೇಕು ಎಂದು ಪೋನ್ ಕರೆ ಮೂಲಕ ಸಂಬಂಧಿಸಿದ ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು.