ಸುಖದ ಮೂಲ ಧರ್ಮ ಪಾಲನೆಯಲ್ಲಿದೆ : ರಂಭಾಪುರಿ ಶ್ರೀ

ಸುಖದ ಮೂಲ ಧರ್ಮ ಪಾಲನೆಯಲ್ಲಿದೆ : ರಂಭಾಪುರಿ ಶ್ರೀ

ರಾಣೇಬೆನ್ನೂರಿನಲ್ಲಿ ಶನೈಶ್ಚರ ಮಂದಿರದ ಕಾರ್ತಿಕೋತ್ಸವ

ರಾಣೇಬೆನ್ನೂರು, ಡಿ.5- ಸುಖದ ಮೂಲ ಧರ್ಮದಲ್ಲಿದೆ. ಧರ್ಮಪಾಲನೆಯಿಂದ ಮನುಷ್ಯ ಸುಖವಾಗಿರಲು ಸಾಧ್ಯ. ಇದನ್ನರಿತು ನಡೆದರೆ   ಸುಖೀ ಜೀವನ ನಡೆಸಬಹುದು ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಗಳು ನುಡಿದರು. 

ನಗರದ ಶನೈಶ್ಚರ ಮಂದಿರದಲ್ಲಿ ನಡೆದ ಧರ್ಮ ಸಮಾರಂಭ ಹಾಗೂ ಕಾರ್ತಿಕೋತ್ಸವ ಕಾರ್ಯ ಕ್ರಮದ ಸಾನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯ ಹೆಚ್ಚು ಶಕ್ತಿಶಾಲಿಯಾಗಿದೆ. ಹಿಡಿದ ಕೆಲಸ ಪೂರ್ಣ ಮನಸ್ಸಿನಿಂದ ಮಾಡಬೇಕು. ಬದುಕು ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣ, ಆ ಬದುಕಿಗೆ ನಾವೇ ನಾಯಕರು. ಆ ಬದುಕನ್ನು ಬದುಕಿ, ಯಶಸ್ಸು ಸಾಧಿಸುವುದು ಅವಶ್ಯವಿದೆ ಎಂದು ಜಗದ್ಗುರುಗಳು ತಿಳಿಸಿದರು.

ಆಧುನಿಕ ವಿಜ್ಞಾನ ,ತಂತ್ರಜ್ಞಾನದ ಪ್ರಪಂಚದಲ್ಲಿ ಮನುಷ್ಯ ಶಾಂತಿಯಿಂದ ಬದುಕು ನಡೆಸಲು ಕಷ್ಟಸಾಧ್ಯವಾಗಲಿದೆ. ಹಣದ ಬೆನ್ನು ಹತ್ತಿ ಸಂಸ್ಕೃತಿ ಮರೆಯಾಗುತ್ತಿರುವ ಈ ದಿನಮಾನಗಳಲ್ಲಿ ಇಂತಹ ಧಾರ್ಮಿಕ ಸಭೆ- ಸಮಾರಂಭಗಳು ಮಾರ್ಗದರ್ಶನ ನೀಡಲಿವೆ. ಈ ಮೂಲಕ  ಆದರ್ಶಗಳ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಮಾರಂಭ ಉದ್ಘಾಟಿ ಸಿದ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಬಂಕಾಪುರ ಅರಳೆಲೆ ಮಠದ ರೇವಣಸಿದ್ದ ಶ್ರೀಗಳು, ಶಿವಯೋಗಿ ಹಾಲಸ್ವಾಮಿಗಳು, ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಯು.ಬಿ.ಬಣಕಾರ, ಯಾಸೀರ್ ಖಾನ್ ಪಠಾಣ, ಉಪಸಭಾಪತಿ ರುದ್ರಪ್ಪ ಲಮಾಣಿ,  12ನೇ ವರ್ಷದ ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟ ದೊಡ್ಡಣ್ಣ, ದಾವಣಗೆರೆಯ ಶಿವಕುಮಾರ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ವರ್ತಕರಾದ             ಶ್ರೀನಿವಾಸ ಕಾಕಿ, ಬಸವರಾಜ ಪಟ್ಟಣಶೆಟ್ಟಿ, ಕಾಂಗ್ರೆಸ್ ಮುಖಂಡ  ಚಂದ್ರಪ್ಪ ಬೇಡರ  ಮತ್ತಿತರರಿದ್ದರು. 

ಪೀಠಾಧಿಪತಿ ಶಿವಯೋಗಿ ಶ್ರೀಗಳು ಮಾತನಾಡಿ, ಮಠದ  ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಭಕ್ತರನ್ನು ನೆನೆಪಿಸಿಕೊಂಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. 12ನೇ ವರ್ಷದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ್ ಮಾತನಾಡಿ, ಕಡಿಮೆ ಸಮಯದಲ್ಲಿ ಮಠ ಏಳ್ಗೆಯಾಗುತ್ತಿರುವುದಕ್ಕೆ ಭಕ್ತರ ಶ್ರದ್ದೆ ಕಾರಣವೆಂದರು.

error: Content is protected !!