ಹರಿಹರ, ಡಿ.5- ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್ಸಿಸಿ ಕಳಚಿ ಬಿದ್ದ ಘಟನೆ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಡೆದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ದೀಟೂರು ಗ್ರಾಮಸ್ಥರ ವತಿಯಿಂದ ಗ್ರಾಮದ ಆರಂಭದ ಸ್ಥಳದಲ್ಲಿ ಸ್ವಾಗತ ಕಮಾನನ್ನು ನಿರ್ಮಿಸಲಾಗುತ್ತಿತ್ತು.
30 ಅಡಿಯ ಈ ರಸ್ತೆಯಲ್ಲಿ ಸ್ವಾಗತ ಕಮಾನಿಗಾಗಿ ಎರಡೂ ಬದಿ ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಎರಡು ಪಿಲ್ಲರ್ಗಳ ಮಧ್ಯದಲ್ಲಿ ಹಂದರಕ್ಕೆ ಆರ್ಸಿಸಿ ಹಾಕುವ ಕಾರ್ಯ ನಡೆದಿತ್ತು. ಅಂದಾಜು 15 ಕಾರ್ಮಿಕರಿಂದ ಬೆಳಿಗ್ಗೆ ಯಿಂದ ಆರ್ಸಿಸಿ ಹಾಕುವ ಕಾರ್ಯ ನಡೆಯುತ್ತಿತ್ತು.
ಮಧ್ಯಾಹ್ನ 2 ಗಂಟೆ ವೇಳೆ ಆರ್ಸಿಸಿಗೆ ಆಧಾರವಾಗಿಟ್ಟಿದ್ದ ಕಟ್ಟಿಗೆಗಳು ಉರುಳಿ ಬಿದ್ದಿದ್ದು, ಅದರ ಜೊತೆಗೆ ಕಬ್ಬಿಣದ ಸರಳಿನ ಹಂದರ ಹಾಗೂ ಆರ್ಸಿಸಿಯು ಕುಸಿದು ಬಿದ್ದಿತು. ಆ ಸಂದರ್ಭದಲ್ಲಿ ಒಬ್ಬ ಕಾರ್ಮಿಕ ಹಂದರದ ಕೆಳಕ್ಕೆ ಸಿಲುಕಿದ್ದರು. ಕಾರ್ಮಿಕರು ತಕ್ಷಣ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಕಾರಣ ಆ ಕಾರ್ಮಿಕ ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾ ಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.