ದಾವಣಗೆರೆ, ಡಿ.3- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 90 ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ನಗರದ ಜಿಎಫ್ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆಗಳು ನಡೆದವು. ಕಾಲೇಜಿ ನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿರುವ ರಾಘವೇಂದ್ರ, ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರನಾಗಿದ್ದು, ಸ್ಪರ್ಧೆಯಲ್ಲಿ 90 ಕೆಜಿ ವಿಭಾಗದಲ್ಲಿ ದೇಹ ಪ್ರದರ್ಶಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ.
ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾನೆ. ಸ್ಪರ್ಧೆಯಲ್ಲಿ ಬೈಸಿಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿದ್ದಾನೆ. ರಾಘವೇಂದ್ರನ ದೇಹ ಪ್ರದರ್ಶನ ವೇಳೆ ಶಿಳ್ಳೆ, ಚಪ್ಪಾಳೆ ಕೇಳಿ ಬಂದವು,
ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬರುವ ಫೆಬ್ರುವರಿಯಲ್ಲಿ ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ. ಚಿನ್ನದ ಪದಕ ಗೆದ್ದಿರುವ ರಾಘವೇಂದ್ರನಿಗೆ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದಿಸಿದ್ದಾರೆ.