ಹರಪನಹಳ್ಳಿ : ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವಿಲ್ ಕಿರಿಯ ನ್ಯಾಯಾಧೀಶರಾದ ಎಸ್.ಪಿ. ಮನುಶರ್ಮ
ಹರಪನಹಳ್ಳಿ, ಡಿ. 3 – ನಿರಂತರ ಅಧ್ಯಯನದ ಮೂಲಕ ಉತ್ತಮ ವಕೀಲರಾಗಲು ಅವಕಾಶವಿದ್ದು, ವಕೀಲ ವೃತ್ತಿಯ ಘನತೆ, ಗೌರವವನ್ನು ಕಾಪಾಡಿ ಕೊಂಡು ಮುನ್ನಡೆಯಬೇಕು ಎಂದು ಸಿವಿಲ್ ಕಿರಿಯ ನ್ಯಾಯಾಧೀಶರಾದ ಎಸ್.ಪಿ. ಮನುಶರ್ಮ ಹೇಳಿದರು.
ಪಟ್ಟಣದ ವಕೀಲರ ಸಂಘದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮದಿನದ ಅಂಗವಾಗಿ ವಕೀಲರ ದಿನಾಚರಣೆ ಆಚರಿಸಲಾಗುವುದು, ಕಿರಿಯ ವಕೀಲ ವೃತ್ತಿಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಹಿರಿಯ ವಕೀಲರಿಗೆ ಗೌರವಿಸೋಣ, ಕಿರಿಯ ಹಿರಿಯ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಉತ್ತಮ ವಕೀಲರಾಗಿ ಯಶಸ್ವಿಯಾಗಿ ಬದಲಾವಣೆ ಆಗುವುದಕ್ಕೆ ಸಾಧ್ಯವಾಗುತ್ತದೆ.
ಸರ್ಕಾರದ ಕಾನೂನು, ಕಾಯ್ದೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನ್ಯಾಯಾಲಯ ನಮ್ಮ ಜ್ಞಾನ ದೇಗುಲ. ಈ ಜ್ಞಾನ ದೇಗುಲದಲ್ಲಿ ಸೃಜನಶೀಲ ವಕೀಲರಾಗಿ ಬೆಳೆಯಬೇಕು, ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಮಾತನಾಡಿ, ವಕೀಲರು ಹೆಚ್ಚು ಹೆಚ್ಚು ಕಾನೂನು ತಿಳಿದುಕೊಂಡರೆ ಉತ್ತಮ ವಕೀಲರಾಗಲು ಸಾಧ್ಯ. ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಮಾತ್ರ ವೃತ್ತಿ ಪರತೆ ಹೆಚ್ಚುತ್ತದೆ. ಜತೆಗೆ ತಮ್ಮ ವೃತ್ತಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿ ಕತೆಯಿಂದ ಕೆಲಸ ಮಾಡಿದರೆ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ ಎಂದರು.
ವಕೀಲರಾದ ಬಿ. ಕೃಷ್ಣ ಮೂರ್ತಿ ಮಾತನಾಡಿ, ವಕೀಲ ವೃತ್ತಿ ಬಹಳ ಕಠಿಣವಾದ ವೃತ್ತಿಯಾಗಿದ್ದು, ಶ್ರದ್ಧೆಯಿಂದ ಅಭ್ಯಾಸ ಮಾಡಿಕೊಂಡು ನ್ಯಾಯಾಲಯಕ್ಕೆ ತೆರಳಿದಾಗ ಕಕ್ಷಿದಾರರಿಗೆ ನ್ಯಾಯ ಕೊಡಿಸಿದ್ದಂತಾಗುತ್ತದೆ. ವಕೀಲರ ಸಂಘಕ್ಕೆ ಸರ್ಕಾರದ ಅನುದಾನದಲ್ಲಿ ವಕೀಲರ ಗ್ರಂಥಾ ಲಯವನ್ನು ಸ್ಥಾಪಿಸಬೇಕೆಂದರು.
ವಕೀಲ ಕೆ. ಜಗದಪ್ಪ ಮಾತನಾಡಿ, ಜಗತ್ತಿನ ಏಕೈಕ ಶಕ್ತಿಶಾಲಿ ವೃತ್ತಿ ಎಂದರೆ ವಕೀಲ ವೃತ್ತಿ, ಶ್ರೇಷ್ಠವಾದ ವೃತ್ತಿ ಇದಾಗಿದೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಏಕೈಕ ವೃತ್ತಿಯಂದರೆ ವಕೀಲ ವೃತ್ತಿ ಇಂತಹ ವಕೀಲ ವೃತ್ತಿಯನ್ನು ಸರಳವಾಗಿ ಕೊಂಡೊಯ್ದು ಕಕ್ಷಿದಾರರಿಗೆ ನ್ಯಾಯ ಕೂಡಿಸುವ ಕೆಲಸ ಮಾಡಬೇಕು ಎಂದರು.
ವಕೀಲರಾದ ಪಿ. ಜಗದೀಶ್ ಗೌಡ, ಕಣವಿಹಳ್ಳಿ ಮಂಜುನಾಥ್, ಮಾತನಾಡಿದರು. ಈ ಸಂಧರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಉಷಾರಾಣಿ ವಕೀಲರ ಸಂಘದ ಕಾರ್ಯದರ್ಶಿಯಾದ ಕೇಶವಮೂರ್ತಿ ಹೆಚ್.ಎಂ. ಖಜಾಂಚಿ ಹೂಲೆಪ್ಪ, ಎಂ. ಮೃತ್ಯೂಂಜ್ಯಯ, ಬಸವನಗೌಡ ಬಿ.ವಿ. ಕಾರ್ಯ ಕಾರಿಣಿ, ಮಂಡಳಿ ಸದಸ್ಯ ಪ್ರಭಾಕರ, ಎಂ. ನಳಿನ, ಬಿ. ತಿಪ್ಪೇಶ್, ಸಿ. ಹಾಲೇಶ್, ಕಂಡ್ಯಪ್ಪ, ಕರಿಯಪ್ಪ, ಸೇರಿದಂತೆ ಇತರೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹಾಜರಿದ್ದರು.