ದಾವಣಗೆರೆ, ಡಿ. 1- ‘ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಹಸ್ತಾಂತರ, ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ಧತಿ ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಸ್ತ ದಲಿತ ಸಂಘಟನೆಗಳು, ಬೌದ್ಧ ಸಂಘ–ಸಂಸ್ಥೆಗಳು, ಬುದ್ಧ ವಿಹಾರಗಳು ಹಾಗೂ ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ವತಿಯಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರತಿಭಟನಾ ಮನವಿ ಸಲ್ಲಿಸಲಾಯಿತು.
ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಜಗತ್ತಿನಲ್ಲಿ ಇರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ.
ಇದುವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ
ಬೌದ್ಧರಿಗೆ ನೀಡಿಲ್ಲ ಎಂದು ಆರೋಪಿಸಿ, ಸಂವಿಧಾನ ದಿನವಾದ ನವೆಂಬರ್ 26ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ನಗರದಲ್ಲೂ ಸಹ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನಾಕಾರರು, ನಮ್ಮಗಳ ಪ್ರತಿಭಟನೆ ಬೌದ್ಧ ಧರ್ಮೀಯರ
ಮತ್ತು ಅಂಬೇಡ್ಕರ್ ಅನುಯಾಯಿಗಳ ಹಾಗೂ ಭಾರತದ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಹಕ್ಕಾಗಿದೆ.
ದೇಶವನ್ನಾಳುವ ಸರ್ಕಾರಗಳು ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿವೆ. ಈ ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನ ದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಬುದ್ಧಗಯಾದ ಮಹಾಬೋಧಿ ಮಹಾ ವಿಹಾರವನ್ನು ಸ್ವತಂತ್ರವಾಗಿ ನಿರ್ವಹಿಸುವ ಅವಕಾಶ ನೀಡಲು ಸಂವಿಧಾನದ ಕಲಂ-3, 25, 26 ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ. ಆಕ್ಟ್ 1949ನ್ನು ರದ್ದುಪಡಿಸಿ, ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಡಿ.ಎನ್.ಹಾಲೇಶಪ್ಪ, ಜಿಲ್ಲಾಧ್ಯಕ್ಷ ಮಂಜಪ್ಪ ನೀತಿಗೆರೆ, ಚನ್ನಪ್ಪ, ಗುರು ಪ್ರಸಾದ್, ಶಾಂತರಾಜಪ್ಪ, ವಿಜಯ್, ಚಿದಾನಂದ, ಲಿಂಗರಾಜ್ ಇತರರು ಇದ್ದರು.