ಚಿತ್ರದುರ್ಗ, ನ.24- ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷಗಳ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ ಮುನ್ನೆಲೆಗೆ ತಂದ ಪ್ರತಿಪಕ್ಷಗಳ ನಡೆಗೆ ಜನಾಕ್ರೋಶ ಮೂರು ಉಪ ಚುನಾವಣೆಯಲ್ಲಿ ಹೊರಬಿದ್ದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ.
ಸದಾ ಅಹಿಂದ ವರ್ಗದ ಹಿತ ಬಯಸುವ ಸಿದ್ದರಾಮಯ್ಯ, ಎಲ್ಲಾ ಸಮುದಾಯದ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಯಶಸ್ಸು ಕಂಡಿದ್ದಾರೆ. ಆದರೆ, ಇದನ್ನು ಸಹಿಸದೆ, ಸಿದ್ದರಾಮಯ್ಯ ಅವರನ್ನು ಕೆಣಕುವ ಪ್ರಯತ್ನ ನಡೆಸಿ, ಮತದಾರರಿಂದ ಪ್ರತಿಪಕ್ಷಗಳು ಮಂಗಳಾರತಿ ಮಾಡಿಸಿಕೊಂಡಿವೆ ಎಂದಿದ್ದಾರೆ.
ಮುಡಾ ಹೆಸರಲ್ಲಿ ಹಗರಣ ನಡೆದಿದೆ ಎಂದು ಸುಳ್ಳು ಸುದ್ದಿ ಹರಡಿ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುವ ಯತ್ನ ಹಾಗೂ ಅಹಿಂದ ನಾಯಕನೊಬ್ಬ ಎರಡನೇ ಬಾರಿ ಸಿಎಂ ಆಗಿ ಅವಧಿ ಪೂರ್ಣಗೊಳಿಸುವ ಪ್ರಯತ್ನಕ್ಕೆ ಅಡ್ಡಿಪಡಿಸುವ ಪ್ರತಿಪಕ್ಷಗಳ ಷಡ್ಯಂತ್ರ ವನ್ನು ಸಹಿಸಿಕೊಳ್ಳುವುದಿಲ್ಲವೆಂಬ ಸಂದೇಶವನ್ನು ಮತದಾರರೇ ರವಾನಿಸಿದ್ದಾರೆ.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಹಾಗೂ ಐದು ಗ್ಯಾರಂಟಿಗಳು ಜಾರಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಆದೇಶ ಸೇರಿ ಅನೇಕ ಕ್ರಾಂತಿಕಾರಿ ನಡೆ ಕೈಗೊಂಡ ಸಿದ್ದರಾಮಯ್ಯ ನಾಯಕತ್ವ ಪ್ರಶ್ನಾತೀತ ಎಂಬ ಸಂದೇಶವನ್ನು ಜನರು ಫಲಿತಾಂಶದ ಮೂಲಕ ಸಾರಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ವಕ್ಫ್ ಮಂಡಳಿ ಆದೇಶ, ಕೇಂದ್ರ ಸರ್ಕಾರದ ಸೂಚನೆ, ಕಾರಣಕ್ಕೆ ರಾಜ್ಯದಲ್ಲಿ ಅನೇಕರ ಬಿಪಿಎಲ್ ಪಡಿತರ ಚೀಟಿ ರದ್ದು ವಿಷಯವನ್ನು ಕಾಂಗ್ರೆಸ್ ಪಕ್ಷವೇ ನಡೆಸಿದೆ ಎಂದು ಸುಳ್ಳು ಆರೋಪ ಮಾಡಿ, ಜನರನ್ನು ಎತ್ತಿಕಟ್ಟುವ ಯತ್ನಕ್ಕೆ ಮತದಾರ ಸೊಪ್ಪು ಹಾಕಿಲ್ಲ. ಸತ್ಯವನ್ನಷ್ಟೇ ನಾವು ಒಪ್ಪಿಕೊಳ್ಳುವುದು ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ.