ಕೊಟ್ಟೂರು, ನ.24- ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಞಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ವಿಜ್ಞಾನದ ಅರಿವು ಮತ್ತು ಜಾಗೃತಿ’ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿ ಸಂವಾದ ನಡೆಸಿದರು.
ವಿಜ್ಞಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾ ಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ವಿಜ್ಞಾನ ಸಮಿತಿ ಸದಸ್ಯ ಅಬಲೂರು ಶಾಂತಕುಮಾರ್, ರಾಮಣ್ಣ, ನಾಗರಾಜ್ ಬಂಜಾರ್, ವಿನಯ್ ಮುದೇನೂರ್, ಉಪನ್ಯಾಸಕರಾದ ಸಿ.ಬಸವರಾಜ್, ಕೆ.ಎಂ.ರೇಣುಕಾಸ್ವಾಮಿ, ಆರಾಧ್ಯ ಸ್ವಾಮಿ, ಚೇತನ್ ಚೌವಾಣ್, ಡಾ.ವಿಜಯಕುಮಾರ್, ಕೆ.ಕೊಟ್ರೇಶ್, ಶಿವಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.