ಹೊನ್ನಾಳಿ ಸರ್ಕಾರಿ ಬಸ್‍ನಿಲ್ದಾಣಕ್ಕೆ ‘ವೀರರಾಣಿ ಕಿತ್ತೂರು ಚೆನ್ನಮ್ಮ’ ಹೆಸರು

ಹೊನ್ನಾಳಿ ಸರ್ಕಾರಿ ಬಸ್‍ನಿಲ್ದಾಣಕ್ಕೆ ‘ವೀರರಾಣಿ ಕಿತ್ತೂರು ಚೆನ್ನಮ್ಮ’ ಹೆಸರು

ಹೊನ್ನಾಳಿ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಹೊನ್ನಾಳಿ, ನ.17- ಪಟ್ಟಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ವೀರರಾಣಿ  ಕಿತ್ತೂರು ಚೆನ್ನಮ್ಮ ಎಂದು ನಾಮಕರಣ ಮಾಡಲು ಹೊನ್ನಾಳಿ ಪುರಸಭೆಯು ಸರ್ವಾನುಮತದಿಂದ ತೀರ್ಮಾನ ಕೈಗೊಂಡ ಬಗ್ಗೆ ವರದಿಯಾಗಿದೆ.

ಹೊನ್ನಾಳಿ ಪುರಸಭೆಯ ನೂತನ ಅಧ್ಯಕ್ಷ ಮೈಲಪ್ಪನವರ  ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಶಾಸಕ ಶಾಂತನಗೌಡರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ 22ನೇ ವಿಷಯವಾಗಿ ದೊಡ್ಡಪೇಟೆ ಪುರಸಭೆ ಸದಸ್ಯರಾದ ಪದ್ಮಾ ಪ್ರಶಾಂತ ಅವರು, ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡುವಂತೆ ಮನವಿ ಮಾಡಿದರು. ಇದಕ್ಕೆ ಉಪಸ್ಥಿತರಿದ್ದ ಪುರಸಭೆ ಉಪಾಧ್ಯಕ್ಷರನ್ನೊಳಗೊಂಡಂತೆ ಸರ್ವ ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.

ಹೊನ್ನಾಳಿ ತಿಮ್ಮಿಕನಕಟ್ಟೆ ರಸ್ತೆ ಅಗಲೀಕರಣದಲ್ಲಿ ಪುರಸಭೆ ವಾಣಿಜ್ಯ 12 ಮಳಿಗೆಗಳು ಅಳತೆ ಪ್ರಕಾರ ಕೆಡುವಬೇಕಾಗುತ್ತದೆ. ಉಳಿದಿರುವ 26 ಮಳಿಗೆಗಳಲ್ಲಿ ಹಾನಿಯಾಗಿದ್ದ ಕೆಲವು ಮಳಿಗೆಗಳನ್ನು ಗುರುತಿಸಿ ಕೆಡುವಂತೆಯು,  ಸಾಧ್ಯವಾದಲ್ಲಿ ಮಳಿಗೆಗಳ ಅಭಿವೃದ್ದಿಗೊಳಿಸಿ, ಆ ಮಳಿಗೆಗಳ ಹರಾಜಿಗೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.

ಮಲ್ಲದೇವರ ಕಟ್ಟೆ 29 ಎಕರೆ ಜಮೀನಿನಲ್ಲಿ ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಮಾಡಲು ಅರ್ಹ ಪಲಾನುಭವಿಗಳಿಂದ  ಅರ್ಜಿ ಪಡೆದು ನಿವೇಶನ ಹಂಚಿಕೆಮಾಡಲು ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಬಗ್ಗೆ ತೀರ್ಮಾನಿಸಿದ ಸಭೆಯು ಇಂದಿರಾ ಕ್ಯಾಂಟಿನ್ ಆರಂಭಿಸಲು ಸ್ಥಳ ನಿಗದಿಗೊಳಿಸಿ, ಶ್ರೀಘ್ರವೇ ಆರಂಭಿಸುವಂತೆ ಚರ್ಚಿಸಿದರು.

ಪಟ್ಟಣದ ಮಾತೆಂಗಮ್ಮ ದೇವಸ್ಥಾನ, ಹನುಮಾನ ದೇವಸ್ಥಾನ, ಸಾರ್ವಜನಿಕ ಗ್ರಾಂಥಾಲಯ, ದುರ್ಗಾಂಭಿಕಾ ದೇವಸ್ಥಾನ, ಪಾದಕಟ್ಟೆ, ಚೌಡೇಶ್ವರ ಪಾದಕಟ್ಟೆಗಳಿಗೆ ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಬದಲಿ ನಿವೇಶನ ಮಂಜೂರಾತಿ ಮಾಡುವ ಬಗ್ಗೆ ಆಯಾ ಸ್ಥಳಗಳಲ್ಲಿ ನಿವೇಶನಗಳಿದ್ದರೆ ಕಲ್ಪಿಸುವಂತೆ, ಈ ವಿಷಯವಾಗಿ ಶಾಸಕ ಶಾಂತನಗೌಡರು ಸಂಬಂಧಿಸಿದ ಎಇಇ ನಾಗರಾಜರವರಿಗೆ ದೂರವಾಣಿಯೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದರು.

ದೇವನಾಯ್ಕನಹಳ್ಳಿ, ಹಿರೇಕಲ್ಮಠ ಗ್ರಾಮಸ್ಥರಿಗೆ ಈ ಸ್ವತ್ತು ನೀಡಲು ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ಈ ಸ್ವತ್ತು ನೀಡುವಂತೆ ಚರ್ಚಿಸಲಾಯಿತು.

ಪುರಸಭೆಯ ಮುಖ್ಯ ಅಧಿಕಾರಿ ಲೀಲಾವತಿ, ಪುರಸಭೆಯ ಉಪಾಧ್ಯಕ್ಷೆ  ಸಾವಿತ್ರಮ್ಮ ವಿಜಯೇಂದ್ರಪ್ಪ, ಸದಸ್ಯರಾದ ಶ್ರೀಧರ್, ಬಾಬು ಹೋಬಳದಾರ, ರಂಗನಾಥ್, ರಾಜಣ್ಣ, ಧರ್ಮಪ್ಪ, ಎಂ.ಸುರೇಶ್, ಹೊಸಕೆರೆ ಸುರೇಶ್, ರಾಜೇಂದ್ರ, ಸುಮ ಮಂಜುನಾಥ್, ಸುಮಾ ಸತೀಶ್, ರಂಜಿತಾ ಚನ್ನಪ್ಪ, ಅನುಶಂಕರ ಚಂದ್ರು, ತನ್ವೀರ್, ಸವಿತಾ ಮಹೇಶ್, ಪದ್ಮಾ ಪ್ರಶಾಂತ, ಉಷಾ ಗಿರೀಶ, ಇಂಜಿನಿಯರ್ ದೇವರಾಜ್‌ ಇನ್ನಿತರರಿದ್ದರು.

error: Content is protected !!