ವಿದ್ಯಾರ್ಥಿಗಳು ತಾವು ಸೇವಿಸಿದ ಚಾಕಲೇಟ್, ಕುರೆಕುರೆ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಮೇಲ್ಕವಚಗಳಾದ ಪ್ಲಾಸ್ಟಿಕ್ಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಮುಂದಿನ ಪೀಳಿಗೆ ಆರೋಗ್ಯವಂತರಾಗಿ ಬದುಕಲು, ನೀರಿನ ಆಕರಗಳು ಶುದ್ಧವಾಗಿರಬೇಕು.
– ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಿರೇಕಲ್ಮಠ, ಹೊನ್ನಾಳಿ.
ಹೊನ್ನಾಳಿ, ನ. 12- ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ಶೃಂಗೇರಿಯಿಂದ ಆರಂಭವಾಗಿರುವ ನಿರ್ಮಲ ತುಂಗಭದ್ರಾ ಅಭಿಯಾನ-ಕರ್ನಾಟಕ ಬೃಹತ್ ಪಾದಯಾತ್ರೆ ತಂಡ ಇಲ್ಲಿಗೆ ಸಮೀಪದ ತುಂಗಭದ್ರಾ ನದಿ ತಟದ ಮೇಲಿರುವ ಚೀಲೂರು ಹಾಗೂ ಗೋವಿನಕೋವಿ ಗ್ರಾಮಗಳಿಗೆ ಮಂಗಳವಾರ ಆಗಮಿಸಿದಾಗ ಪಾದಯಾತ್ರಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ನಂತರ ಗೋವಿನಕೋವಿ ಗ್ರಾಮದಲ್ಲಿ ಪಾದಯಾತ್ರೆಯ ಪ್ರಾಮುಖ್ಯತೆ ಹಾಗೂ ಜಲಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನು ಕುಲದ ಅನಾರೋಗ್ಯಕ್ಕೆ ಕಲುಷಿತ ನೀರು ಕಾರಣವಾಗಿರುವುದರಿಂದ ಎಲ್ಲಾ ನದಿಗಳ ಶುದ್ಧೀಕರಣವಾಗುವುದು ಅವಶ್ಯಕ ಹಾಗೂ ಅನವಾರ್ಯ ಎಂದು ಹೇಳಿದರು.
ಮನುಷ್ಯನ ಅತೀ ಚಟುವಟಿಕೆಗಳಿಂದ ಮಣ್ಣು ಮತ್ತು ನೀರು ಮಲಿನಗೊಳ್ಳುತ್ತಿದೆ. ತಗ್ಗಿದ್ದ ಕಡೆ ನೀರು ಹರಿಯುವುದು ನೀರಿನ ಗುಣ, ಎಲ್ಲಾ ತ್ಯಾಜ್ಯಗಳು ಹಳ್ಳದಿಂದ ನದಿ ಪಾತ್ರಗಳನ್ನು ಸೇರಿ ನದಿ ನೀರು ಕಲುಷಿತಗೊಂಡು ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಎಲ್ಲರೂ ಎಚ್ಚೆತ್ತುಕೊಂಡು ನದಿಗಳ ಶುದ್ಧೀಕರಣಕ್ಕೆ ಕೈಜೋಡಿಸಬೇಕು ಎಂದರು.
ನಿರ್ಮಲ ತುಂಗಭದ್ರಾ ಅಭಿಯಾನದ ಮೂಲಕ ತುಂಗಭದ್ರಾ ನದಿ ಮೂಲದ ಶೃಂಗೇರಿಯಿಂದ ನದಿ ಹರಿಯುವ ಉದ್ದಕ್ಕೂ ಪಾದಯಾತ್ರೆ ಹಮ್ಮಿಕೊಂಡು ಪ್ರಮುಖ ಸ್ಥಳಗಳಲ್ಲಿ ಜಲ ಜಾಗೃತಿ ಕಾರ್ಯಕ್ರಮದೊಂದಿಗೆ ಗಂಗಾವತಿ ತಾಲ್ಲೂಕಿನ ಕಿಷ್ಕಿಂಧೆಯವರೆಗೆ ಸುಮಾರು 430 ಕಿ.ಮೀ.ಗಳವರೆಗೆ ಪಾದಯಾತ್ರೆ ಹಮ್ಮಿಕೊಂಡು ಜಲದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ನಿವೃತ್ತ ಪ್ರೊ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಪ್ರಮುಖರಾದ ಗಿರೀಶ್ ಪಾಟೀಲ್, ನಿವೃತ್ತ ಪ್ರಾಂಶುಪಾಲ ಡಾ.ನಾಗಭೂಷಣ್, ನಿರ್ದೇಶಕ ದತ್ತ, ವೈದ್ಯನಾಥ್, ನಿವೃತ್ತ ಉಪನ್ಯಾಸಕ ಡಾ.ಎಸ್.ವರದರಾಜ್, ಮಹೇಶ್, ಸ್ಥಳೀಯ ಮುಖಂಡರಾದ ಎ.ಬಿ.ಹನುಮಂತಪ್ಪ, ಎಂ.ಆರ್.ಮಹೇಶ್, ಕೆ.ವಿ.ಚನ್ನಪ್ಪ, ಎಚ್.ಎಂ.ಅರುಣ್ಕುಮಾರ್, ವಾಸಪ್ಪ, ಶ್ರೀನಿವಾಸ್, ಕತ್ತಿಗೆ ನಾಗರಾಜ್, ಪ್ರವೀಣ್ಪಾಟೀಲ್, ರಮೇಶ್, ಗ್ರಾಪಂ ಜನಪ್ರತಿನಿಧಿಗಳು ಹಾಗೂ ಇತರರು ಇದ್ದರು.
ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ನಗರದ ಓಪನ್ಮೈಂಡ್ ಶಾಲಾ ಮಕ್ಕಳು ಶೃಂಗೇರಿಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ತಂಗುವ ಸ್ಥಳದಲ್ಲಿ ವಿವಿಧ ನಾಟಕಗಳು ಸೇರಿದಂತೆ, ಕಲಾಪ್ರಕಾರಗಳನ್ನು ಅನಾವರಣ ಗೊಳಿಸುವ ಪ್ರದರ್ಶನ ಮಾಡುತ್ತಿ ರುವುದು ಶ್ಲ್ಯಾಘನೀಯವಾಗಿದೆ.