ರಸ್ತೆ ಅಕ್ಕ – ಪಕ್ಕದ ತಿಪ್ಪೇಗುಂಡಿಗಳನ್ನು ತೆರವುಗೊಳಿಸಿ

ರಸ್ತೆ ಅಕ್ಕ – ಪಕ್ಕದ ತಿಪ್ಪೇಗುಂಡಿಗಳನ್ನು ತೆರವುಗೊಳಿಸಿ

ಹರಪನಹಳ್ಳಿ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಎಂ.ಪಿ. ಲತಾ ನಿರ್ದೇಶನ

ಹರಪನಹಳ್ಳಿ, ಅ.30-  ಹಳ್ಳಿಗಳಲ್ಲಿ ಸಾರ್ವಜನಿಕ ರಸ್ತೆಯ ಅಕ್ಕ-ಪಕ್ಕದಲ್ಲಿ ಹಾಕಿಕೊಂಡಿರುವ ತಿಪ್ಪೆಗುಂಡಿಗಳನ್ನು ಕೂಡಲೇ ತೆರವುಗೊಳಿಸಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಗ್ರಾ.ಪಂ ಪಿಡಿಒಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಬುಧವಾರ ನಡೆದ 2ನೇ ತ್ರೈಮಾಸಿ ಪ್ರಗತಿ ಪರಿಶೀಲಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಜನರು ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ತಿಪ್ಪೆಗುಂಡಿಗಳನ್ನು ಹಾಕಿಕೊಂಡಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಪ್ರತಿಯೊಬ್ಬ ಪಿಡಿಒಗಳು ತಕ್ಷಣವೇ ಯಾವುದೇ ಮುಲಾಜಿಲ್ಲದೇ ತಮ್ಮ ಗ್ರಾ.ಪಂ ವ್ಯಾಪ್ತಿಯ ಸುತ್ತ-ಮುತ್ತ ರಸ್ತೆಯಲ್ಲಿ ಹಾಕಿಕೊಂಡಿರುವ ಎಲ್ಲಾ ತಿಪ್ಪೆಗುಂಡಿಗಳನ್ನು ತೆರವುಗೊಳಿಸಿ ಗ್ರಾಮದಲ್ಲಿ ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿ ಜನರ ಆರೋಗ್ಯ ಕಾಪಾಡಿ ಎಂದು ಪಿಡಿಒಗಳಿಗೆ ಸೂಚಿಸಿದರು.

ನಂದ್ಯಾಲ ಗ್ರಾಮದಲ್ಲಿ ಸಿಸಿ ರಸ್ತೆಯೊಂದರಲ್ಲಿ ದನಕರುಗಳನ್ನು ಕಟ್ಟುತ್ತಿರುವ ಪರಿಣಾಮ ಅಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆ ಕ್ರಮವಹಿಸಿ ಎಂದು ಗ್ರಾ.ಪಂ ಪಿಡಿಒ ಬೋಜಪ್ಪ ಅವರಿಗೆ ತಿಳಿಸಿದರು.

ಅಲ್ಲಲ್ಲಿ ವಾಂತಿ ಭೇದಿ ಪ್ರಕರಣಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ವಹಿಸಿ ಎಂದು ಶಾಸಕರು ಟಿಎಚ್‍ಒ ಅವರಿಗೆ ಸೂಚಿಸಿದರು ಆಗ ಟಿಎಚ್‍ಒ ಪೃಥ್ವಿ ಮಾತನಾಡಿ ಈಗಾಗಲೇ ಎಲ್ಲಾ ಕಡೆ ನಮ್ಮ ಸಿಬ್ಬಂದಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈಚೇಗೆ ಟಿ.ತುಂಬಿಗೇರಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದ್ದವು. ಆದರೆ ಮೃತರ ಶವ ಪರೀಕ್ಷೆ ವರದಿಯಲ್ಲಿ ಬೇರೆ ಕಾಯಿಲೆಗೆ ಮೃತಪಟ್ಟಿರುವುದು ಧೃಢಪಟ್ಟಿದೆ ಎಂದು ಸಭೆಯ ಗಗನಕ್ಕೆ ತಂದರು.

ತಾಲ್ಲೂಕಿನ ಅನೇಕ ಕಡೆ ಸರ್ಕಾರಿ ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವುದಿಲ್ಲ, ಸರಿಯಾಗಿ ಪಾಠ ಮಾಡುವುದಿಲ್ಲ ಊರಲ್ಲಿ ರಾಜಕೀಯ ಮಾಡುತ್ತಾ ಹರಟೆ ಹೊಡೆಯುತ್ತಾರೆ ಎಂಬ ದೂರುಗಳಿವೆ, ಯಾವವ ಶಿಕ್ಷಕರು ಏನೇನೂ ಮಾಡುತ್ತಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ ತಾವು ರಾಜಕೀಯ ಮಾಡುವುದಾದರೆ ತಮ್ಮ ಶಿಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯ ಮಾಡಿ ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಮೊಟ್ಟೆ, ಗುಣಮಟ್ಟದ ರೇಷನ್ ನೀಡುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಕ್ರಮವಹಿಸಿ ಎಂದು ಶಾಸಕರು ಸೂಚಿಸಿದರು.

ತಹಶಿಲ್ದಾರ ಬಿ.ವಿ.ಗಿರೀಶಬಾಬು, ತಾ.ಪಂ ಇಒ ಚಂದ್ರಶೇಖರ್‌ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ವೈ.ಎಚ್. ಎಇಇ ಕುಬೇಂದ್ರನಾಯ್ಕ್, ಪ್ರಕಾಶ ಪಾಟೀಲ್, ಕಿರಣ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಕೃಷಿ ಅಧಿಕಾರಿ ಉಮೇಶ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಂಗಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

error: Content is protected !!