ನಗರವನ್ನು ಸುಂದರವನ್ನಾಗಿಸಲು ವಿಶೇಷ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ದೂಡಾ ನಿಯೋಗ ಮನವಿ

ನಗರವನ್ನು ಸುಂದರವನ್ನಾಗಿಸಲು ವಿಶೇಷ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ದೂಡಾ ನಿಯೋಗ ಮನವಿ

ದಾವಣಗೆರೆ, ಅ.30-ದಾವಣಗೆರೆ – ಹರಿಹರ ಅವಳಿ ನಗರಗಳನ್ನು ಸುಂದರ ಮತ್ತು ಸುವ್ಯವಸ್ಥಿತವಾಗಿ ಅಭಿೃವದ್ಧಿಪಡಿಸುವ ನಿಟ್ಟಿನಲ್ಲಿ ರೂ. 1226 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ದಾವಣಗೆರೆ – ಹರಿ ಹರ ನಗರಾಭಿವೃದ್ಧಿ ಪ್ರಾಧಿಕಾರದ ನಿಯೋ ಗವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ನಿನ್ನೆ ಭೇಟಿ ಮಾಡಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ನೇತೃತ್ವದ ದೂಡಾ ನಿಯೋಗವು
ಲಿಖಿತ ಮನವಿ ಅರ್ಪಿಸಿತು.

ಇದೇ ಸಂದರ್ಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಾಹಿತಿ ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಬೇತೂರು ಗ್ರಾಮದಿಂದ ಬಾಡಾ ಕ್ರಾಸ್‌ವರೆಗೆ 36 ಮೀಟರ್ ವರ್ತುಲ ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ., ದೊಡ್ಡ ಬೂದಿಹಾಳ್‌ನಿಂದ ಯರಗುಂಡೆ, ದೊಡ್ಡಪಾತಿ, ಕುಂದುವಾಡ ಗ್ರಾಮಗಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿವರೆಗೆ ವರ್ತುಲ ರಸ್ತೆಗೆ 200 ಕೋಟಿ ರೂ., ದಾವಣಗೆರೆ ಅಶೋಕ ಟಾಕೀಸ್‌ನಿಂದ ಈರುಳ್ಳಿ ಮಾರುಕಟ್ಟೆವರೆಗೆ ರೈಲ್ವೆ ಹಳಿಗಳಿಗೆ ಸಮಾನಂತರ ಸೇವಾ ರಸ್ತೆಯ ನಿರ್ಮಾಣಕ್ಕೆ 35 ಕೋಟಿ ರೂ., ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆಯ  ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು 25 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಲಾಯಿತು.

 ರೈಲ್ವೆ ಸ್ಟೇಷನ್, ಖಾಸಗಿ ಬಸ್ ನಿಲ್ದಾಣ, ಅಶೋಕ ಟಾಕೀಸ್ ಮುಂಭಾಗ ಸ್ಕೈ ವಾಕ್ ನಿರ್ಮಿಸಲು 3 ಕೋಟಿ ರೂ., ದಾವಣಗೆರೆ, ಹರಿಹರದಲ್ಲಿ ಸರ್ಕಾರಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ 50 ಕೋಟಿ ರೂ., ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಭಾಂಗಣಕ್ಕೆ 15 ಕೋಟಿ ರೂ., ಹರಿಹರದ ಕೇಶವನಗರ, ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿಯಲ್ಲಿ ಮಹಾ ಯೋಜನೆಯಲ್ಲಿ ಕಾಯ್ದಿರಿಸಿದ ಟ್ರಕ್ ಟರ್ಮಿನಲ್ ಅಭಿವೃದ್ಧಿಗೆ 25 ಕೋಟಿ ರೂ., ಸುಸಜ್ಜಿತ ಒಂದು ಮ್ಯೂಸಿಯಂ ನಿರ್ಮಿಸಲು 10 ಕೋಟಿ ರೂ., ನಗರ ವಾಹನ ದಟ್ಟಣೆ ಮುಕ್ತವಾಗಿಸಲು ಪಿ.ಬಿ. ರಸ್ತೆಯಿಂದ ಹದಡಿ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ 500 ಕೋಟಿ ರೂ. ನೀಡುವಂತೆ ಮನವಿ ಮಾಡಲಾಯಿತು.

ಟಿವಿ ಸ್ಟೇಷನ್ ಕೆರೆ ಪ್ರವಾಸಿಗರನ್ನು ಆಕರ್ಷಿಸಲು, ಅದರ ಸೌಂದರ್ಯೀಕರಣ, ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು 5 ಕೋಟಿ ರೂ., ದಾವಣಗೆರೆ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 20 ಕೋಟಿ ರೂ., ಬಾತಿ ಗುಡ್ಡದಿಂದ ಕುಂದುವಾಡ ಕೆರೆವರೆಗೆ ರೋಪ್‌ವೇ, ಬಾತಿ ಗುಡ್ಡದಲ್ಲಿ 150 ಅಡಿ ಎತ್ತರದ ದಾವಣಗೆರೆಗೆ ಅಭಿಮುಖವಾಗಿ ಆಂಜನೇಯ ಮೂರ್ತಿ/ಬಸವಣ್ಣನವವರ ಮೂರ್ತಿ ನಿರ್ಮಾಣಕ್ಕೆ 2 ಕೋಟಿ ರೂ., ಜವಾಹರ್‌ಲಾಲ್ ನೆಹರು ತಾರಾಲಯ ಮಾದರಿಯಲಾಲಿ ದಾವಣಗೆರೆಯಲ್ಲಿ ತಾರಾಲಯ ನಿರ್ಮಾಣಕ್ಕೆ 10 ಕೋಟಿ ರೂ., ದಾವಣಗೆರೆ – ಹರಿಹರದಲ್ಲಿ 70: 30 ಅನುಪಾತದ ಜಂಟಿ ಉದ್ಯಮದಲ್ಲಿ 500 ಎಕರೆಯಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಕೋರಲಾಯಿತು.

ದೂಡಾ ಸದಸ್ಯರುಗಳಾದ ಎಂ. ಮಂಜುನಾಥ ತಕ್ಕಡಿ, ಶ್ರೀಮತಿ ಎಂ.ಆರ್. ವಾಣಿ ಬಕ್ಕೇಶ್, ಜಬ್ಬಾರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ  ಮತ್ತು ಇತರರು ನಿಯೋಗದಲ್ಲಿದ್ದರು.

error: Content is protected !!