ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಅಭಿಮತ
ದಾವಣಗೆರೆ, ಅ.29- ಸರ್ಕಾರದಿಂದ ದೈಹಿಕ ಶಿಕ್ಷಕರಿಗೆ ಪ್ರೋತ್ಸಾಹ ದೊರೆತಾಗ ಮಾತ್ರ ಉತ್ತಮ ಕ್ರೀಡಾಪಟುಗಳು ಹೊರ ಹೊಮ್ಮಲಿದ್ದಾರೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ 14 ರಿಂದ 17 ವರ್ಷದ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ವಿಶೇಷ ಚೇತನ ಮಕ್ಕಳ ಮೇಲಾಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ ದೈಹಿಕ ಶಿಕ್ಷಕರಿಗೆ ಸರಿಯಾದ ಸೌಲಭ್ಯಗಳು ಇಲ್ಲದ ಕಾರಣ ಕ್ರೀಡಾಪಟುಗಳು ಹಿಂದೆ ಉಳಿಯುತ್ತಿದ್ದಾರೆ ಎಂದರು.
ವಿದೇಶಗಳಲ್ಲಿನ ಶಾಲಾ ಮಕ್ಕಳು ಶಿಕ್ಷಣದ ಜತೆಗೆ ಕ್ರೀಡಾಸಕ್ತಿ ಹೊಂದಿದ್ದರೆ ಅವರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾರೆ. ಹಾಗಾಗಿ ಚಿಕ್ಕ-ಚಿಕ್ಕ ರಾಷ್ಟ್ರಗಳು ಕ್ರೀಡೆಯಲ್ಲಿ ಮನ್ನಣೆ ಪಡೆಯುತ್ತಿವೆ ಎಂದು ಹೇಳಿದರು.
ದೈಹಿಕ ಶಿಕ್ಷಕರಿಗೆ ಉನ್ನತ ಹುದ್ದೆಗೇರುವ ಅವಕಾಶ ಇರುವುದಿಲ್ಲ. ಹಾಗಾಗಿ ಸರ್ಕಾರ ವೇತನ ಹೆಚ್ಚಿಸುವ ಜತೆಗೆ ಇತರೆ ಸೌಲಭ್ಯಗಳನ್ನು ಕಲ್ಪಿಸಿದರೆ ಅನುಕೂಲವಾಗಲಿದೆ ಎಂದರು.
ಡಿಡಿಪಿಐ ಜಿ. ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿ, ಕ್ರೀಡೆಯು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಜತೆಗೆ ಜೀವನದಲ್ಲಿ ನಮ್ಮನ್ನು ಗಟ್ಟಿಗೊಳಿಸುತ್ತದೆ. ಎಷ್ಟೇ ಕಷ್ಟಗಳು ಬಂದರೂ ಎದುರಿಸುವ ಧೈರ್ಯ ನೀಡುತ್ತದೆ ಎಂದು ಹೇಳಿದರು.
ಕ್ರೀಡೆ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಬಿಂಬಿಸುವ ಕಾರ್ಯಕ್ರಮ. ಆದ್ದರಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜತೆಗೆ ನ್ಯಾಯಯುತ ವಾಗಿ ಆಟ ಆಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ. ಮಂಜುಳಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಪ್ಪ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರುಗಳಾದ ವಿಜಯ ಕುಮಾರ್, ಹುಸೇನ್ ಪೀರ್, ಸುರೇಶ್ ರೆಡ್ಡಿ, ಚಂದ್ರಶೇಖರ್, ಜಗದೀಶ್, ಸದಾಶಿವಪ್ಪ ಸೇರಿದಂತೆ ಇತರರಿದ್ದರು.