ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ, ಜ.20- ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯಿಂದ ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ಸಮಿತಿ ಪದಾಧಿಕಾರಿಗಳು, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮಾದಿಗ ಸಮಾಜ ಒಳ ಮೀಸಲಿಗಾಗಿ ಆಗ್ರಹಿಸಿ 40 ವರ್ಷದಿಂದ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಲ್ಲದೆ, ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದೆ. ಇದುವರೆಗಿನ ಮುಖ್ಯಮಂತ್ರಿಗಳು ಸಮಾಜಕ್ಕೆ ಚಳ್ಳೇಹಣ್ಣು ತಿನ್ನಿಸುತ್ತಲೇ ಬಂದಿದ್ದಾರೆ. ಹೀಗಾಗಿ ಒಳ ಮೀಸಲು ಗಗನ ಕುಸುಮವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟರಲ್ಲಿ ಮಾದಿಗರ ಜನಸಂಖ್ಯೆಯು ಅಧಿಕವಾಗಿದ್ದರೂ, ಅವರು ಪಡೆದಿರುವ ಮೀಸಲು ಸವಲತ್ತು ಅತೀ ಕಡಿಮೆಯಿದೆ. ಅದನ್ನು ಸರಿದೂಗಿಸಲು ಒಳಮೀಸಲಾತಿ ಜಾರಿಗೊಳಿಸಬೇಕು.ಅದರಿಂದ ಯಾವ ಜಾತಿಗಳಿಗೂ ಅನ್ಯಾಯವಾಗುವುದಿಲ್ಲ. ಅವರವರ ತಟ್ಟೆಯ ಅನ್ನವನ್ನು ಅವರವರೇ ತಿನ್ನಬೇಕು. ಮತ್ತೊಬ್ಬರ ತಟ್ಟೆಯ ಅನ್ನವನ್ನು ಬೇರೊಬ್ಬರು ತಿನ್ನುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ. ಸಿ.ಕೆ. ಮಹೇಶ್, ರಾಜ್ಯ ಉಪಾಧ್ಯಕ್ಷರುಗಳಾದ ರುದ್ರಪ್ಪ, ಇಮ್ತಿಯಾಜ್ ಹುಸೇನ್, ಜಿಲ್ಲಾಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ರದುರ್ಗ ಚಿಕ್ಕಣ್ಣ, ಜಿಲ್ಲಾ ಗೌರವಾಧ್ಯಕ್ಷ ಬಿ. ಎನ್. ನಾಗೇಶ್,  ದುರ್ಗಪ್ಪ, ಗುಮ್ಮನೂರು ಪರಶುರಾಂ, ವಕೀಲ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!