ಹೊನ್ನಾಳಿಯ ಉಮಾ ಅವರಿಗೆ ಶ್ರೇಷ್ಠ ಪ್ರಗತಿ ಪರ ರೈತ ಮಹಿಳೆ ಪ್ರಶಸ್ತಿ

ಹೊನ್ನಾಳಿಯ ಉಮಾ ಅವರಿಗೆ  ಶ್ರೇಷ್ಠ ಪ್ರಗತಿ ಪರ ರೈತ ಮಹಿಳೆ ಪ್ರಶಸ್ತಿ

ಹೊನ್ನಾಳಿ, ಅ.20- ತಾಲ್ಲೂಕಿನ ಲಿಂಗಾಪುರ ಗ್ರಾಮದ ರೈತ ಮಹಿಳೆ ಕೆ.ಎಚ್. ಉಮಾ ಸೋಮಶೇಖರಪ್ಪ ಅವರ ಸಮಗ್ರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೊನ್ನೆ ನಡೆದ ‘ಕೃಷಿ ಮತ್ತು ತೋಟಗಾರಿಕೆ ಮೇಳ’ದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಉಮಾ ಅವರ ಪತಿ ಸೋಮಶೇಖರ್ ಅವರ ಪ್ರೋತ್ಸಾಹದಿಂದ 4 ವರ್ಷಗಳ ಹಿಂದೆ 12 ಹಸುಗಳ ಸಾಕಾಣಿಕೆಯನ್ನು ಪ್ರಾರಂಭಿಸಿ ಇಂದು ಎಚ್.ಎಫ್., ಜರ್ಸಿ, ಗಿರ್, ಸಾಹಿವಾಲು, ನಾಟಿ ಹಸುಗಳ ತಳಿಗಳು ಸೇರಿದಂತೆ ಒಟ್ಟು 36 ಹಸುಗಳಿವೆ. ಬೆಳಿಗ್ಗೆ 70 ಲೀಟರ್ ಸಂಜೆ 70 ಲೀಟರ್ ಒಟ್ಟು 140 ಲೀಟರ್‍ಗಳಷ್ಟು ಹಾಲು ಸಂಗ್ರಹವಾಗುತ್ತಿದೆ. ಇವರ ಹೈನುಗಾರಿಕಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.  

ಸಮಾರಂಭದಲ್ಲಿ ಶಿವಮೊಗ್ಗದ ಬಸವ ಕೇಂದ್ರದ ಮರಳಸಿದ್ಧ ಸ್ವಾಮೀಜಿ, ಎಂ.ಎಲ್ಸಿ. ಬಲ್ಕಿಶ್ ಬಾನು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಜಗದೀಶ್, ಕೃಷಿ ಇಲಾಖಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!