ಗಾಂಧೀಜಿ, ಶಾಸ್ತ್ರೀಜಿ ಜಯಂತಿಯಲ್ಲಿ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ
ದಾವಣಗೆರೆ, ಅ. 7 – ಗಾಂಧೀಜಿಯವರು ಆದರ್ಶಮಯ ವ್ಯಕ್ತಿತ್ವವನ್ನು ಹೊಂದಿದ್ದ ವಿಶ್ವನಾಯಕರಾಗಿದ್ದರು. ಈಗಲೂ ವಿಶ್ವದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಗಾಂಧೀಜಿಯವರ ಅನುಯಾಯಿಗಳಿದ್ದಾರೆ. ಬಲ ಎನ್ನುವುದು ಶಾರೀರಿಕ ಸಾಮರ್ಥ್ಯದಿಂದ ಬರುವಂತದ್ದಲ್ಲ. ಅದು ನಮ್ಮಲ್ಲಿರುವ ಅದಮ್ಯವಾದ ಇಚ್ಛಾಶಕ್ತಿ ಯಿಂದ ಬರುವಂತದ್ದು ಎಂದು ಗಾಂಧೀಜಿಯವರು ನಂಬಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾ ನಗರ ಲಯನ್ಸ್ ಕ್ಲಬ್ ಹಾಗೂ ವಿನೂತನ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿ ಯವರ 155 ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 120 ನೇ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ರಿಟೀಷರನ್ನು ಎದುರಿಸಲು ಸತ್ಯಾಗ್ರಹ, ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳಿಗೆ ಮನ್ನಣೆ, ಗ್ರಾಮೀಣ ಸ್ವಾವಲಂಬನೆ, ಅಸ್ಪೃಶ್ಯತೆಯ ನಿವಾರಣೆ, ಮದ್ಯಪಾನ ನಿಷೇಧ, ದೇಶೀ ಭಾಷೆಗಳಿಗೆ ಉತ್ತೇಜನ ನೀಡುವುದು. ಇವೇ ಮೊದಲಾದ ವಿಧಾಯಕ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ತಮ್ಮ ವಿಶಿಷ್ಟವಾದ ವ್ಯಕ್ತಿತ್ವದ ಮೂಲಕ ಯುವ ಸಮುದಾಯವನ್ನು ಸೂಜಿಗಲ್ಲಿ ನಂತೆ ಸೆಳೆದು, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಅಸಹಕಾರ ಚಳುವಳಿ, ಕಾಯಿದೆ ಭಂಗ ಹೋರಾಟ, ಆಮರಣ ಉಪವಾಸ, ಭಾರತ ಬಿಟ್ಟು ತೊಲಗಿ ಚಳುವಳಿ ಮೊದಲಾದ ವಿವಿಧ ಹಂತಗಳ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಗಾಂಧೀಜಿ ಯವರು ನಮಗೆಲ್ಲರಿಗೂ ಆದರ್ಶಪ್ರಾಯರು ಎಂದು ವಾಮದೇವಪ್ಪ ಬಣ್ಣಿಸಿದರು.
ವಿದ್ಯಾನಗರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಸ್.ಎಲ್. ಪ್ರಭುದೇವ್ ಮಾತನಾಡಿ, ನೆಲ್ಸನ್ ಮಂಡೇಲಾ ಕೂಡ ಗಾಂಧೀಜಿಯವರು ನನ್ನ ಜೀವನಕ್ಕೆ ಪ್ರೇರಣೆ ಆಗಿದ್ದರು ಎಂದು ಹೇಳುತ್ತಿದ್ದರು. ತಮ್ಮ ಸರಳ ಬದುಕು, ಅಹಿಂಸೆ, ಸತ್ಯ ಮಾರ್ಗದ ಸಿದ್ಧಾಂತದ ಮೂಲಕ ವಿಶ್ವದಾದ್ಯಂತ ಅನುಯಾಯಿಗಳನ್ನು ಹೊಂದಿದ್ದರು. ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ನಾವು ತಿಳಿದಿದ್ದರೆ ಸಾಲದು, ಅವುಗಳ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಮಹಾನ್ ವ್ಯಕ್ತಿಗಳಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ವಿನೂತನ ಮಹಿಳಾ ಸಮಾಜದ ಉಪಾಧ್ಯಕ್ಷೆ ಶೈಲಜಾ ತಿಮ್ಮೇಶ್ ಮಾತನಾಡಿ, ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಕೇವಲ 17 ತಿಂಗಳ ಅವಧಿಗೆ ಅವರು ಪ್ರಧಾನಿಯಾಗಿದ್ದರೂ ಅವರ ಪಾರದರ್ಶಕ ಆಡಳಿತ ಹಾಗೂ ಚಿಂತನೆಗಳು ಸದಾ ದೇಶದ ಸದೃಡತೆಗೆ ಬಲಿಷ್ಠ ಅಡಿಪಾಯವಾಗಿದೆ ಎಂದರು.
ಲಯನ್ಸ್ ಮಾಜಿ ಗವರ್ನರ್ ಡಾ.ಜಿ.ಶಿವಲಿಂಗಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಡಾ.ಜಿ.ಶಿವಲಿಂಗಪ್ಪ, ಬಾ.ಮ.ಬಸವರಾಜಯ್ಯ, ರಂಗ ಸಂಘಟಕ ಎನ್.ಎಸ್.ರಾಜು, ಸತ್ಯಭಾಮ ಮಂಜುನಾಥ್, ಹೆಚ್.ಎನ್. ಶಿವಕುಮಾರ್, ಬಕ್ಕೇಶ್ ನಾಗನೂರು, ಸುದರ್ಶನ್ ಕುಮಾರ್, ಕೋಮಲ್ ಕುಮಾರ್, ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.