ಜನವಸತಿ ಪ್ರದೇಶದಲ್ಲಿ ಟಿಸಿ

ಜನವಸತಿ ಪ್ರದೇಶದಲ್ಲಿ ಟಿಸಿ

ಸ್ಥಳಾಂತರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ

ಮಾಯಕೊಂಡ, ಅ.7- ಕ್ಷೇತ್ರದ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಇರುವ ಟ್ರಾನ್ಸ್ ಫಾರ್ಮರ್‌ಗಳನ್ನು  ಜನವಸತಿ ಪ್ರದೇಶದ ಹೊರಗೆ ಸ್ಥಳಾಂತರ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ನವಿಲೇಹಾಳು ಗ್ರಾಮದ ಜನವಸತಿ ಪ್ರದೇಶದಲ್ಲಿರುವ ಟಿಸಿಯಿಂದ  ಬೆಂಕಿಯ ಕಿಡಿಗಳು ಇಬ್ಬರು ಮಕ್ಕಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು  ಶಾಸಕರನ್ನು ಭೇಟಿಯಾಗಿ ಜನವಸತಿ ಪ್ರದೇಶದಿಂದ ಟಿಸಿ ಸ್ಥಳಾಂತರ ಮಾಡಿಸುವಂತೆ ಒತ್ತಾಯಿಸಿದರು.

ಗ್ರಾಮದ ಬುಡೇನ್ ಸಾಬ್ ಎಂಬುವರ ಮನೆ ಎದುರೇ ಟಿಸಿ ಇದ್ದು, ಟಿಸಿಯ ಎರಡು ಕಂಬಗಳ ನಡುವೆ ಮನೆಯ ಹೊರಗೆ, ಒಳಗೆ ಓಡಾಡಬೇಕು. ಆಗಾಗ ಟಿಸಿಯಿಂದ ಬೆಂಕಿಯ ಕಿಡಿಗಳು ಸಿಡಿಯುತ್ತವೆ. ಇದರಿಂದ ಕುಟುಂಬಸ್ಥರು ಭಯದಿಂದ ಬದುಕು ನೂಕುವಂತಾಗಿದೆ ಎಂದು ಅಲವತ್ತುಕೊಂಡರು.

ಕೂಡಲೇ ಸಂತೇಬೆನ್ನೂರಿನ ಬೆಸ್ಕಾಂ ಸಹಾಯಕ ಇಂಜಿನಿಯರ್ ನಾಗರಾಜ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು,   ನವಿಲೇಹಾಳು ಗ್ರಾಮದ ಜನವಸತಿ ಪ್ರದೇಶದಲ್ಲಿರುವ ಟಿಸಿಯನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅವಘಡಗಳಿಂದ ಸಾಕಷ್ಟು ಸಾವು- ನೋವು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪ್ತಿಯ ಪ್ರದೇಶಗಳ ಜನವಸತಿ ಪ್ರದೇಶದಲ್ಲಿ ಹಾಕಿರುವ ಟಿಸಿಗಳನ್ನು ಗುರುತಿಸಿ, ಅವುಗಳನ್ನು ಸ್ಥಳಾಂತರ ಮಾಡಲು ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಕೂಡಲೇ ಅವುಗಳನ್ನು ಸ್ಥಳಾಂತರ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮೊಸೀಮ್ ವಕೀಲ್, ಮಂಜುನಾಥ್, ಬುಡೇನ್ ಸಾಬ್, ಹೊನ್ನೂರು ಸಾಬ್, ಅಜರತ್ ಅಲಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

error: Content is protected !!