ಹನುಮಸಾಗರ ಗ್ರಾಮ ಪಂಚಾಯಿತಿ ಉದ್ಘಾಟನೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಸೆ.30- ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪೈಕಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗಿರದೇ ಇರುವ ಮಹತ್ತರವಾದ ಅಧಿಕಾರ ಅಂದರೆ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಇದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನ ಅಷ್ಟು ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕಿನ ಹನುಮಸಾಗರದಲ್ಲಿ ಇಂದು ಏರ್ಪಾಡಾಗಿದ್ದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಪಂಚಾಯಿತಿಗಳಲ್ಲಿ ಯಾವಾಗಲೂ ಸಭೆಗಳನ್ನು ನಡೆಸುತ್ತಿದ್ದರೆ, ಇದೀಗ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಸರ್ಕಾರದ ಅನುದಾನ, ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣಾಭಿವೃದ್ದಿ ಕೆಲಸಗಳು ತೃಪ್ತಿಕರವಾಗಿ ನಡೆಯುತ್ತಿವೆ ಎಂದರು.
ಗ್ರಾಮಪಂಚಾಯಿತಿ ಚುನಾಯಿತ ಪ್ರತಿನಿಧಿ ಗಳು ಆದಷ್ಟು ಪ್ರಾಮಾಣಿಕವಾಗಿ ತಮ್ಮ ಸುತ್ತ ಮುತ್ತಲ ಗ್ರಾಮ, ಜನರ ಹಿತರಕ್ಷಣೆಗಾಗಿ ಕೆಲಸ ಮಾಡಬೇಕು. ಆಗ ಮಾತ್ರ ಗ್ರಾಮ ಸ್ವರಾಜ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ದೇಶದಲ್ಲಿ ಕ್ರಾಂತಿವೀರ ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಅವರು ಮಹಿಳಾ ಸಬಲೀಕರಣಕ್ಕಾಗಿ ಹೋರಾಡಿದ ಮಹನೀಯರು. ಇದರ ಪರಿಣಾಮ ಇಂದು ಗ್ರಾಮ ಪಂಚಾಯಿತಿಗಳಲ್ಲಿ ಶೇ.50 ರಷ್ಟು ಹಾಗೂ ಇತರೆ ಚುನಾವಣೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ದೊರೆತಿದೆ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಶೃತಿ ಮಂಜುನಾಥ್ ಮಾತನಾಡಿ, ಈ ಹಿಂದೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿತ್ತು. ಇದನ್ನು ಕಂಡು ಉತ್ತಮ ಕಟ್ಟಡ ನಿರ್ಮಿಸಬೇಕು ಎಂಬ ಕನಸು ಇಲ್ಲಿನ ಗ್ರಾಮಸ್ಥರಿಗಿತ್ತು. ಎಲ್ಲರ ಸಹಕಾರದಿಂದ ಅದು ನನಸಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇ.ಓ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ. ಪಿ.ಡಿ.ಓ. ಶಿವಕುಮಾರ್ ಡಿ. ಸ್ವಾಗತಿಸಿದರು. ಗ್ರಾ.ಪಂ. ಅಧ್ಯಕ್ಷೆ ಶೃತಿ ಮಂಜುನಾಥ್, ಉಪಾಧ್ಯಕ್ಷ ನಾಗರಾಜ್ ನಾಯ್ಕ ಸೇರಿದಂತೆ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಯಿತು.
ಜಿ.ಪಂ.ಇಂಜಿನಿಯರಿಂಗ್ ಉಪವಿಭಾಗದ ಎ.ಇ.ಇ. ಮೋತಿಲಾಲ್, ತಾ.ಪಂ., ವ್ಯವಸ್ಥಾಪಕ ಮಹಮ್ಮದ್ ರಫಿ, ಮುಖಂಡ ಕೊನಾಯ್ಕನಹಳ್ಳಿ ಮಂಜುನಾಥ್, ಗ್ರಾ.ಪಂ. ಕಾರ್ಯದರ್ಶಿ ಎಸ್. ಮಂಜುನಾಥ್ , ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನಾಗರಾಜ್ ಮತ್ತು ಇತರರು ಭಾಗವಹಿಸಿದ್ದರು.